

ತಾಪ್ಸಿ ಪನ್ನು, ಸ್ವರಾ ಭಾಸ್ಕರ್ ಮತ್ತು ರಿಚಾ ಚಡ್ಡಾ ಅವರನ್ನು ಕಂಗನಾ ರಣಾವಣ್, ಬಿ ಗ್ರೇಡ್ ನಟಿಯರು ಎಂಬ ಸುದ್ದಿ ಕಳೆದ ಮೂರು ದಿನಗಳಿಂದ ಸಾಕಷ್ಟು ಚರ್ಚೆಯಾಗಿದೆ. ಈ ವಿಷಯವಾಗಿ ತಾಪ್ಸಿ ಮತ್ತು ಸ್ವರಾ ಇಬ್ಬರೂ ಕಂಗನಾಗೆ ಟಾಂಗ್ ಕೊಟ್ಟಿದ್ದೂ ಆಗಿದೆ.
ಎಲ್ಲಾ ಸರಿ, ಇಷ್ಟಕ್ಕೂ ಕಂಗನಾಗೆ ಈ ನಟಿಯರ ಬಗ್ಗೆ ಯಾಕೆ ಸಿಟ್ಟು ಎಂಬ ಪ್ರಶ್ನೆ ಬರದೇ ಇರದು. ಕಂಗನಾಗೆ ಹೇಗೆ ಒಂದು ಅಭಿಪ್ರಾಯ ಮತ್ತು ನಿಲುವು ಇದೆಯೋ, ಅದೇ ರೀತಿ ಬೇರೆ ನಟಿಯರಿಗೂ ಅವರದ್ದೇ ಆಗ ನಿಲುವು ಮತ್ತು ಅಭಿಪ್ರಾಯ ಇರುತ್ತದೆ. ಹಾಗಿರುವಾಗ, ತಾನು ಮಾತ್ರ ಸರಿ, ಮಿಕ್ಕವರೆಲ್ಲಾ ತಪ್ಪು ಎಂದು ಅವರ ಮೇಲೆ ಹೌಹಾರುವುದು ಎಷ್ಟು ಸರಿ ಎಂದು ಸಹಜವಾಗಿಯೇ ಬಹಳ ಜನ ಕೇಳಿದ್ದಾರೆ.
ಇದನ್ನೂ ಓದಿ: ಕಂಗನಾ ಇಷ್ಟೆಲ್ಲಾ ಮಾಡಿದ್ದು ತಮಾಷೆಗಂತೆ!
ವಿಷಯವೇನೆಂದರೆ, ಕಂಗನಾಗೆ ಮೊದಲಿನಿಂದಲೂ ಸ್ವರಾ ಕಂಡರೆ ಅಷ್ಟಕ್ಕಷ್ಟೆಯಂತೆ. ತನಗಿಂಥ ಎಲ್ಲಿ ಆಕೆ ಚೆನ್ನಾಗಿ ನಟಿಸುತ್ತಾರೆ ಎಂಬ ಅಭದ್ರತೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಕೆಲವು ವರ್ಷಗಳಿಂದ ಸ್ವರಾ ಕಂಡರೆ ಕಂಗನಾಗೆ ಸಿಡಿಸಿಡಿ ಎನ್ನುತ್ತಲೇ ಇರುತ್ತಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಇದೆಲ್ಲಾ ಶುರುವಾಗಿದ್ದು 'ತನು ವೆಡ್ಸ್ ಮನು' ಚಿತ್ರದಿಂದಂತೆ. ಆ ಚಿತ್ರದಲ್ಲಿ ಕಂಗನಾ ಮತ್ತು ಸ್ವರಾ ಇಬ್ಬರೂ ನಟಿಸಿದ್ದರು. ಈ ಚಿತ್ರದಲ್ಲಿ ಸ್ವರಾ ಒಂದು ದೃಶ್ಯದಲ್ಲಿ ಬಹಳ ಚೆನ್ನಾಗಿ ನಟಿಸಿದರಂತೆ. ಮೆಚ್ಚಿಕೊಂಡ ನಿರ್ದೇಶಕರು, ಸ್ವರಾ ಅವರನ್ನು ಎಲ್ಲರೆದುರೂ ಹೊಗಳಿದ್ದಾರೆ.
ಅಲ್ಲಿಂದ ಇವೆಲ್ಲವೂ ಶುರುವಾಯಿತು ಎಂದು ಹೇಳಲಾಗುತ್ತಿದೆ. ಆಗಲೇ, ಸ್ವರಾ ಜತೆಗೆ ಕಾಲು ಕೆರೆದುಕೊಂಡು ಜಗಳ ಮಾಡಿದ್ದರಂತೆ ಕಂಗನಾ. ಸುಮಾರು 200 ಜನರ ಎದುರು ಅವರಿಬ್ಬರ ಜಟಾಪಟಿ ಆಗಿದೆ. ಆ ವಿಷಯವನ್ನು ಸ್ವರಾ ಮರೆತರೂ, ಕಂಗನಾ ಮರೆತಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಸ್ವರಾ ವಿರುದ್ಧ ಮಾತಾಡುತ್ತಿರುತ್ತಾರಂತೆ.
ಇದೀಗ ಸುಶಾಂತ್ ಆತ್ಮಹತ್ಯೆಯ ನಂತರ ಎದ್ದಿರುವ ನೆಪೋಟಿಸಂ ವಿಷಯದಲ್ಲಿ ಕರಣ್ ಜೋಹರ್ ಪರವಾಗಿ ಸ್ವರಾ ಮಾತಾಡಿದ್ದರಿಂದಲೇ, ಅವರು ಕಂಗನಾರ ಅವಕೃಪೆಗೆ ಪಾತ್ರರಾಗಿದ್ದಾರೆ ಮತ್ತು ಅದೇ ಕಾರಣಕ್ಕೆ ಕಂಗನಾ, ಸ್ವರಾಗೆ ಬಿ-ಗ್ರೇಡ್ ನಟಿ ಎಂಬ ಬಿರುದು ಕೊಟ್ಟಿದ್ದಾರಂತೆ.
ಇದಕ್ಕೆ ಕಂಗನಾ ಏನು ಉತ್ತರ ಕೊಡುತ್ತಾರೋ ಎಂಬ ಕುತೂಹಲ ಮಾತ್ರ ಎಲ್ಲರಿಗೂ ಇದ್ದೇ ಇದೆ.