

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ಸಿಕ್ಕಾಪಟ್ಟೆ ಮಾತನಾಡುತ್ತಿರುವವರೆಂದರೆ ಅದು ಕಂಗನಾ. ಸುಶಾಂತ್ ಸಾವಿಗೆ ನೆಪೋಟಿಸಂ ಮತ್ತು ಬಾಲಿವುಡ್ನ ಕೆಲವು ಬಲಾಢ್ಯರೇ ಕಾರಣ ಎಂದು ಪ್ರತಿಪಾದಿಸುತ್ತಲೇ ಬಂದಿರುವ ಕಂಗನಾಗೆ ಅದೆಷ್ಟು ಜನ ಹಿಡಿ ಶಾಪ ಹಾಕುತ್ತಿದ್ದಾರೋ ಗೊತ್ತಿಲ್ಲ. ಇನ್ನೂ ಅದೆಷ್ಟು ಜನ, ಅವರಿಗೊಂದು ಗತಿ ಕಾಣಿಸಬೇಕು ಎಂದು ಕಾಯುತ್ತಿದ್ದಾರೋ ಗೊತ್ತಿಲ್ಲ.
ಆದರೆ, ಕೆಲವು ವರ್ಷಗಳ ಮುಂಚೆಯೇ, ಕಂಗನಾಗೆ ಒಬ್ಬ ಜನಪ್ರಿಯ ನಿರ್ಮಾಪಕ ಮತ್ತು ನಿರ್ದೇಶಕ ಇದೇ ತರಹ ಧಮ್ಕಿ ಹಾಕಿದ ಕಥೆ ಗೊತ್ತಾ? ನಿನ್ ಕಥೆ ಮುಗೀತು ಎಂದು ಹೇಳಿದ್ದು ಗೊತ್ತಾ? ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. ಕಂಗನಾಗೆ ಹಾಗೆ ಅವಾಜ್ ಹಾಕಿದ್ದು ಬೇರ್ಯಾರೂ ಅಲ್ಲ, ಬಾಲಿವುಡ್ನ ಜನಪ್ರಿಯ ನಿರ್ಮಾಪಕ-ನಿರ್ದೇಶಕ ಆದಿತ್ಯ ಚೋಪ್ರಾ.
ಆದಿತ್ಯ ಚೋಪ್ರಾ ಕೆಲವು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಅಭಿನಯದಲ್ಲಿ 'ಸುಲ್ತಾನ್' ಎಂಬ ಚಿತ್ರವನ್ನು ನಿರ್ಮಿಸಿದ್ದು ಗೊತ್ತೇ ಇದೆ. ಆ ಚಿತ್ರದ ನಾಯಕಿಯಾಗುವುದಕ್ಕೆ ಆದಿತ್ಯ, ಕಂಗನಾರನ್ನು ಕೇಳಿದ್ದರಂತೆ. ಆದರೆ, ಚಿತ್ರದಲ್ಲಿ ತನಗೆ ಮಾಡುವುದಕ್ಕೆ ಏನೂ ಕೆಲಸವಿಲ್ಲ ಎಂದು ಮನಗಂಡ ಕಂಗನಾ, ನಟಿಸುವುದಕ್ಕೆ ನಿರಾಕರಿಸಿದ್ದಾರೆ. ಇದರಿಂದ ಕೆಂಡಾಮಂಡಲರಾದ ಆದಿತ್ಯ, ಇನ್ನು ನಿನ್ನ ಕಥೆ ಮುಗೀತು ಎಂದು ಹೇಳಿ ಹೋದರಂತೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಕಂಗನಾ,'ನಿರ್ದೇಶಕರು ಮನೆಗೆ ಬಂದು ಕಥೆ ಹೇಳಿ ಹೋದರು. ಆದರೆ, ನಾನು ಆ ಸಂದರ್ಭದಲ್ಲಿ 'ರಂಗೂನ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದೆ. ಈ ಚಿತ್ರ ಒಪ್ಪಿಕೊಂಡರೆ, ಡೇಟ್ ಕ್ಲಾಶ್ ಆಗುತ್ತದೆ ಎಂಬ ಕಾರಣಕ್ಕೆ ನಾನು 'ಸುಲ್ತಾನ್'ನಲ್ಲಿ ನಟಿಸುವುದಕ್ಕೆ ಹಿಂಜರಿದೆ. ಆದಿತ್ಯ ಚೋಪ್ರಾ ಅವರನ್ನೇ ನೇರವಾಗಿ ಭೇಟಿಯಾಗಿ ಅವರಿಗೆ ವಿಷಯ ಹೇಳೋಣ ಅಂದುಕೊಂಡೆ. ಅಷ್ಟರಲ್ಲಿ, ಪತ್ರಿಕೆಯೊಂದರಲ್ಲಿ ನಾನು ಆ ಚಿತ್ರದಲ್ಲಿ ನಟಿಸುವುದು ಡೌಟು ಎಂಬ ಸುದ್ದಿ ಬಂದು ಬಿಟ್ಟಿತು. ಇದರಿಂದ ಆದಿತ್ಯಗೆ ಬಹಳ ಸಿಟ್ಟು ಬಂದಿತ್ತು. ಆದಿತ್ಯ ಮೆಸೇಜ್ ಮಾಡಿ, 'ನನಗೇ ಇಲ್ಲ ಅನ್ನೋಕೆ ನಿನಗೆಷ್ಟು ಧೈರ್ಯ. ನಿನ್ನ ಕಥೆ ಮುಗೀತು' ಎಂದು ಹೇಳಿದರಂತೆ.
ಕಂಗನಾ ಈ ವಿಷಯವಾಗಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅವರು ಮಾಡಬೇಕಿದ್ದ ಪಾತ್ರ, ಕೊನೆಗೆ ಅನುಷ್ಕಾ ಶರ್ಮಾಗೆ ಹೋಯಿತು. ಅನುಷ್ಕಾ ಆ ಪಾತ್ರ ಮಾಡಿದರಾದರೂ, ಅವರಿಗೆ ಅದರಿಂದ ಪ್ರಯೋಜನವಾಗಲಿಲ್ಲ.
ಕಂಗನಾಗೆ ಆದಿತ್ಯ ಅವಾಜ್ ಏನೋ ಹಾಕಿದರು, ನಿನ್ ಕಥೆ ಮುಗೀತು ಅಂತ ಹೆದರಿಸಿದರು. ಆದರೆ, ಇದರಿಂದ ಕಂಗನಾಗೆ ಮಾತ್ರ ಯಾವುದೇ ಸಮಸ್ಯೆ ಆಗಿಲ್ಲ. ಆಕೆ ಬಿಂದಾಸ್ ಆಗಿ ಬೇರೆ ಚಿತ್ರಗಳಲ್ಲಿ ನಟಿಸಿಕೊಂಡು, ಇನ್ನಷ್ಟು ಗಟ್ಟಿಯಾಗಿದ್ದಾರೆ.