

ಕಂಗನಾ ರಣಾವತ್ ಇನ್ನೂ ಯಾರ್ಯಾರ ವಿರುದ್ಧ ತಿರುಗಿ ಬೀಳುತ್ತಾರೋ ಹೇಳುವುದು ಕಷ್ಟವಾಗಿದೆ. ನೆಪೋಟಿಸಂ (ಸ್ವಜನಪಕ್ಷಪಾಯ)ದ ವಿಷಯದಲ್ಲಿ ಈಗಾಗಲೇ ಸಾಕಷ್ಟು ಜನರನ್ನು ಎದುರು ಹಾಕಿಕೊಂಡಿರುವ ಕಂಗನಾ, ಇದೀಗ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ವಿರುದ್ಧವೂ ತಿರುಗಿಬಿದ್ದಿದ್ದಾರೆ.
ಇದನ್ನೂ ಓದಿ: ರಜನಿಸಂಗೆ 45 ವರ್ಷ … ಸಂಭ್ರಮಾಚರಣೆ ಶುರು …
ಇತ್ತೀಚೆಗೆ, ಈ ನೆಪೋಟಿಸಂ ಕುರಿತು ಟ್ವೀಟ್ ಮಾಡಿದ್ದ ಒಬ್ಬರು, ರಣಬೀರ್ ಹೆಸರನ್ನು ತೆಗೆದುಕೊಂಡಿದ್ದರು. 'ರಣಬೀರ್ ಅಭಿನಯದ ಸಾಕಷ್ಟು ಸಿನಿಮಾಗಳು ಮಕಾಡೆ ಮಲಗಿವೆ. ಆದರೆ, ಸುಶಾಂತ್ ಅಭಿನಯದ 'ರಬ್ತಾ' ಮತ್ತು ಕಂಗನಾ ಅಭಿನಯದ 'ರಂಗೂನ್' ಚಿತ್ರಗಳು ಸೋಲುತ್ತಿದ್ದಂತೆಯೇ ಅವರಿಬ್ಬರನ್ನೂ ಪಕ್ಕಕ್ಕೆ ಕೂರಿಸಲಾಯಿತು. ನೆಪೋಟಿಸಂ ಏನಿದ್ದರೂ ಚಿತ್ರರಂಗಕ್ಕೆ ಬರುವುದಕ್ಕೆ ಮಾತ್ರ, ಆಮೇಲಿನದ್ದೆಲ್ಲಾ ಅವರ ಕರ್ಮ ಎನ್ನುವಂತೆ ಕೆಲವರು ಮಾತಾಡುತ್ತಾರೆ. ಇದು ನಿಜವಾದರೆ, ಅಷ್ಟೊಂದು ಫ್ಲಾಪ್ ಸಿನಿಮಾಗಳ ನಂತರವೂ ರಣಬೀರ್ ಇನ್ನೂ ಬ್ಯುಸಿಯಾಗಿರುವುದು ಹೇಗೆ' ಎಂದು ಅವರು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಟೀಮ್ ಕಂಗನಾ, 'ಹುಡುಗೀರೆಂದರೆ ರಣಬೀರ್ ಬಾಯ್ಬಾಯಿ ಬಿಡುತ್ತಾರೆ. ಆದರೂ ಆತನನ್ನ ಯಾರೂ ರೇಪಿಸ್ಟ್ ಎಂದು ಕರೆಯುವುದಿಲ್ಲ. ದೀಪಿಕಾ ಪಡುಕೋಣೆ ಯಾವಾಗಲೂ ಮಾನಸಿಕ ಖಾಯಿಲೆಗಳ ಬಗ್ಗೆ ಮಾತಾಡುತ್ತಿರುತ್ತಾರೆ. ಆದರೂ ಆಕೆಯನ್ನು ಯಾರೂ ಸೈಕೋ ಅಥವಾ ಮಾತಗಾತಿ ಎಂದು ಕರೆಯುವುದಿಲ್ಲ. ಈ ಪಟ್ಟ ಅಥವಾ ಬಿರುದುಗಳೇನಿದ್ದರೂ, ಹೊರಗಿನಿಂದ ಬಂದ ಪ್ರತಿಭಾವಂತರಿಗೆ ಮಾತ್ರ. ಸಣ್ಣ ಊರುಗಳಿಂದ, ಮರ್ಯಾದಸ್ಥ ಕುಟುಂಬಗಳಿಂದ ಬಂದವರು ಏನೆಲ್ಲಾ ಅನುಭವಿಸಬೇಕಾಗುತ್ತದೆ ಗೊತ್ತಾ?' ಎಂದು ಟ್ವೀಟ್ ಮಾಡಿದೆ.
ಇದಕ್ಕೂ ಮುನ್ನ ಆಯುಷ್ಮಾನ್ ಖುರಾನಾ ಬಗ್ಗೆ ಟೀಮ್ ಕಂಗನಾ ಮಾತನಾಡಿತ್ತು. ಆಯುಷ್ಮಾನ್ ತರಹದವರು ಬಾಲಿವುಡ್ ಮಾಫಿಯಾಗೆ ಬಕೆಟ್ ಹಿಡಿಯುತ್ತಾರೆ ಎಂದು ಆರೋಪಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಟೀಮ್ ಕಂಗನಾ, ‘ಹೊರಗಿನಿಂದ ಬಂದ ಆಯುಷ್ಮಾನ್ನಂಥವರು, ಬಾಲಿವುಡ್ ಮಾಫಿಯಾ ಬೆಂಬಲಿಸುತ್ತಾ ಬಕೆಟ್ ಹಿಡಿಯುತ್ತಾರೆ. ಅವರಿಗೆ ಯಾರಿಂದಲೂ ಬೆದರಿಕೆ ಇರುವುದಿಲ್ಲ. ಕಂಗನಾ ಮತ್ತು ಸುಶಾಂತ್ನಂತಹ ಕೆಲವರು ಎದುರಿಸುತ್ತಿರುವ ಸಂಘರ್ಷಗಳ ಸಂಪೂರ್ಣ ಲಾಭವನ್ನು ಅವರು ಬಹಿರಂಗವಾಗಿ ನಿರಾಕರಿಸಿ, ಅಪಹಾಸ್ಯ ಮಾಡುವ ಮೂಲಕ ಮಾಫಿಯಾದವರ ಬೆನ್ನಿಗೆ ನಿಲ್ಲುತ್ತಾರೆ’ ಎಂದು ಸಮರ ಸಾರಿತ್ತು.