

ರಜನಿಕಾಂತ್ ಅಭಿನಯದ ಮೊದಲ ತಮಿಳು ಚಿತ್ರ 'ಅಪೂರ್ವ ರಾಗಂಗಳ್' ಬಿಡುಗಡೆಯಾಗಿ ಇದೇ ತಿಂಗಳ 18ಕ್ಕೆ 45 ವರ್ಷಗಳಾಗಿವೆ. 1975ರ ಆಗಸ್ಟ್ 18ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಕೆ. ಬಾಲಚಂದರ್ ಅಭಿನಯದ ಈ ಚಿತ್ರ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಚಿತ್ರರಂಗಕ್ಕೆ ರಜನಿಕಾಂತ್ ಎಂಬ ಪ್ರತಿಭಾವಂತ ನಟನ ಪರಿಚಯ ಮಾಡಿಸಿತು. ಆ ನಂತರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.
ಆ ಚಿತ್ರ 45 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿದ್ದಾರೆ. ಆಗಸ್ಟ್ 18ಕ್ಕೆ ಇನ್ನೂ ಎಂಟು ದಿನಗಳಿರುವಾಗಲೇ, ಒಂದು ಕಾಮನ್ ಡಿಸ್ಪ್ಲೇ ಪಿಕ್ಚರ್ ಬಿಡುಗಡೆ (ಸಿಡಿಪಿ) ಮಾಡುವ ಮೂಲಕ ಅವರು ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಈ ಸಿಡಿಪಿ ಟ್ವಿಟರ್ ಮತ್ತು ಇತರೆ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ವಿಶೇಷವೆಂದರೆ, ಈ ಸಿಡಿಪಿಯನ್ನು ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ. ಮೋಹನ್ ಲಾಲ್, ಮಮ್ಮೂಟ್ಟಿ, ಶಿವಕಾರ್ತಿಕೇಯನ್, ದುಲ್ಕನ್ ಸಲ್ಮಾನ್, ಅನಿರುದ್ಧ್ ರವಿಚಂದರ್, ವಿಘ್ನೇಶ್ ಶಿವನ್, ಲೋಕೇಶ್ ಕನಕರಾಜ್, ಸಂತೋಷ್ ಶಿವನ್, ಸುನೀಲ್ ಶೆಟ್ಟಿ, ಪೀಟರ್ ಹೇನ್, ಪ. ರಂಜಿತ್ ಮುಂತಾದವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ಗಳ ಮೂಲಕ ಹಂಚಿಕೊಂಡಿದ್ದಾರೆ.
ಈ ಸಿಡಿಪಿಯಲ್ಲಿ ರಜನಿಕಾಂತ್ ಅಭಿನಯದ ಹಲವು ಮಹತ್ವದ ಮತ್ತು ಜನಪ್ರಿಯ ಪಾತ್ರಗಳನ್ನು ನೋಡಬಹುದು. 'ಎಂದಿರನ್', 'ಕಾಲ', 'ಭಾಷಾ', ತಿಲ್ಲುಮುಲ್ಲು', 'ಶಿವಾಜಿ - ದಿ ಬಾಸ್', 'ಬಿಲ್ಲಾ' ಮುಂತಾದ ಹಲವು ಚಿತ್ರಗಳಲ್ಲಿನ ಅವರ ಫೋಟೋಗಳನ್ನು ಬಳಸಿಕೊಂಡು ಈ ಸಿಡಿಪಿಯನ್ನು ವಿಶೇಷವಾಗಿ ರಚಿಸಲಾಗಿದೆ.
ಇದನ್ನೂ ಓದಿ: ಸುದೀಪ್ಗೆ ಅಭಿನಂದನೆ ಸಲ್ಲಿಸಿದ ಸಚಿವ ಸುಧಾಕರ್
ಇನ್ನು ಲಾಕ್ಡೌನ್ನಿಂದಾಗಿ, ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಚಿತ್ರದ ಚಿತ್ರೀಕರಣ ನಿಲ್ಲಿಸಲಾಗಿದ್ದು, ಈ ವರ್ಷದ ಕೊನೆಗೆ ಪುನಃ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.