

ಕರೊನಾದಿಂದ ಸುಧಾರಿಸಿಕೊಳ್ಳುತ್ತಿರುವ ಅಮಿತಾಭ್ ಬಚ್ಚನ್, ಸದ್ಯದಲ್ಲೇ ಚಿತ್ರೀಕರಣಕ್ಕೆ ಭಾಗವಹಿಸಬೇಕು ಮತ್ತೊಮ್ಮೆ ಅಭಿನಯದಲ್ಲಿ ಸಕ್ರಿಯರಾಗಬೇಕು ಎಂದು ಭಾವಿಸಿದ್ದರು. ಆದರೆ, ಇದೀಗ 65 ವರ್ಷ ಮೇಲ್ಪಟ್ಟವರು ಶೂಟಿಂಗ್ನಲ್ಲಿ ಭಾಗವಹಿಸಬಾರದು ಎಂಬ ನಿಯಮವೊಂದನ್ನು ರೂಪಿಸುವುದಕ್ಕೆ ಹೊರಟಿರುವಾಗ, ತಾವು ಮುಂದೇನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಕರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರ್ಕಾರವು 65 ವರ್ಷ ಮೇಲ್ಪಟ್ಟವರು ಚಿತ್ರೀಕರಣದಲ್ಲಿ ಭಾಗವಹಿಸಬಾರದು ಎಂಬ ನಿಯಮವೊಂದನ್ನು ತರುವುದಕ್ಕೆ ಮುಂದಾಗಿದೆ. ಈ ವಿಷಯ, ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದು, ಇದೊಂಥರಾ ತಾರತಮ್ಮ ಎಂದು ನ್ಯಾಯಾಲಯ ಸಹ ಹೇಳಿದೆ.
ಇಂಥದ್ದೊಂದು ನಿಯಮಕ್ಕೆ ಅನುಮೋದನೆ ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ. ಒಂದು ಪಕ್ಷ ಹಾಗೇನಾದರೂ ಆದರೆ, ತಮ್ಮಂತವರ ಗತಿ ಏನು, ತಾವು ಮುಂದೆ ಏನು ಮಾಡಬೇಕು ಎಂದು ಅಮಿತಾಭ್ ಪ್ರಶ್ನಿಸಿದ್ದಾರೆ.
ಈ ಕುರಿತು ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿರುವ ಅವರು, 'ಹಲವು ವಿಷಯಗಳು ಮನಸ್ಸನ್ನು ಕಾಡುತ್ತಿವೆ. ಆ ಪೈಕಿ ಒಂದು, 65 ವರ್ಷಕ್ಕೆ ಮೇಲ್ಪಟ್ಟವರು ಇನ್ನು ಮುಂದಿನ ದಿನಗಳಲ್ಲಿ ಕೆಲಸ ಮಾಡುವಂತಿಲ್ಲ ಎಂಬ ತೀರ್ಮಾನ. ಬೇರೆ ಕೆಲಸಗಳಲ್ಲಾದರೆ ಓಕೆ. ನಮ್ಮ ವೃತ್ತಿಯಲ್ಲಿ ರಿಟೈರ್ಮೆಂಟ್ ಎಂಬುದು ಇರಲಿಲ್ಲ. ಈ ತರಹದ ನಿಯಮ ಬಂದರೆ, ಆಗ ನಿವೃತ್ತಿ ಅನಿವಾರ್ಯ ಆಗುತ್ತದೆ' ಎಂದು ಬರೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ತಮಗೇನಾದರೂ ಕೆಲಸಗಳಿವೆಯಾ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ. 'ನನಗೇನಾದರೂ ಪರ್ಯಾಯ ಕೆಲಸಗಳಿವೆಯಾ ಎಂದು ಗೊತ್ತಿದ್ದರೆ ಹೇಳಿ. ಒಂದು ಪಕ್ಷ ಒಂದು ನಿಯಮ ಬಂದರೆ, ಮುಂದೆ ಏನಾದರೂ ಮಾಡಲೇಬೇಕಲ್ಲ. ಗೊತ್ತಿದ್ದರೆ ಹೇಳಿ' ಎಂದು ಅಮಿತಾಭ್ ಬಚ್ಚನ್ ಹೇಳಿಕೊಂಡಿದ್ದಾರೆ.