ಬ್ಯಾಂಗ್ ಟ್ರೇಲರ್ ಬಿಡುಗಡೆ; ಡಾರ್ಕ್ ಕಾಮಿಡಿ ಆ್ಯಕ್ಷನ್ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್, ರಘು ದೀಕ್ಷಿತ್

bang
Published on

ಬೆಂಗಳೂರು: ಗಣೇಶ್ ಪರಶುರಾಮ್ ನಿರ್ದೇಶಿಸಿರುವ ಡಾರ್ಕ್ ಕಾಮಿಡಿ ಆ್ಯಕ್ಷನ್ ಚಿತ್ರ ‘ಬ್ಯಾಂಗ್’. ಇತ್ತೀಚೆಗಷ್ಟೆ ಶಾನ್ವಿ ಶ್ರೀವಾತ್ಸವ್, ರಘು ದೀಕ್ಷಿತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಯಿತು. ಹಿರಿಯ ನಟ ದತ್ತಣ್ಣ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ‘ಇಲ್ಲಿಯವರೆಗೂ ಯಾವ ಚಿತ್ರದಲ್ಲೂ ಇಂತಹ ಪಾತ್ರ ಮಾಡಿಲ್ಲ. ನಿರ್ದೇಶಕ ಗಣೇಶ್ ಒಳ್ಳೆ ಕಥೆ ಮಾಡಿಕೊಂಡಿದ್ದಾರೆ. ನನ್ನ ಜತೆ ನಟಿಸಿರುವ ಎಲ್ಲಾ ಕಲಾವಿದರೂ ಚೆನ್ನಾಗಿ ಅಭಿನಯಿಸಿದ್ದಾರೆ’ ಎಂದು ಹೇಳಿಕೊಂಡರು.

ಇನ್ನು ಪ್ರಮುಖ ಪಾತ್ರದಲ್ಲಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ನಟಿಸಿದ್ದು, ‘ಗಣೇಶ್ ಮತ್ತು ಸಂಗೀತ ನಿರ್ದೇಶಕ ರಿತ್ವಿಕ್ ನನ್ನನ್ನು ಭೇಟಿಯಾಗಲು ಬಂದಾಗ ನಾನು ಹಾಡು ಹಾಡಲು ಕೇಳೋಕೆ ಬಂದಿದ್ದಾರೆ ಅಂದುಕೊಂಡೆ. ಆದರೆ, ಅವರು ನೀವು ಈ ಚಿತ್ರದಲ್ಲಿ ಅಭಿನಯಿಸಬೇಕು ಅಂತ ಹೇಳಿದಾಗ ನನಗೆ ಆಶ್ಚರ್ಯವಾಯಿತು. ನಾನು ಮೊದಲು ಒಪ್ಪಲಿಲ್ಲ. ಅವರು ಬಿಡಲಿಲ್ಲ. ಕೊನೆಗೆ ನಾನು ಈ ಚಿತ್ರದಲ್ಲಿ ನಟಿಸುವಂತಾಯಿತು. ಶಾನ್ವಿ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ಶಾನ್ವಿ 2 ಇನ್ 1 ಭರ್ಜರಿ ಪ್ರಚಾರ
ಆ. 18ರಂದು ‘ಬ್ಯಾಂಗ್’ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು, ಚಿತ್ರತಂಡ ಸದ್ಯ ಪ್ರಚಾರ ಕಾರ್ಯಗಳಲ್ಲಿ ಬಿಜಿಯಾಗಿದೆ. ಅದರಲ್ಲೂ ನಟಿ ಶಾನ್ವಿ ಶ್ರೀವಾತ್ಸವ್ ವಿಶೇಷ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಭಾನುವಾರ (ಜು. 30) ನಗರದ ಮಲ್ಲೇಶ್ವರದ ಸಿಟಿಆರ್ ಮತ್ತು ರಾಮೇಶ್ವರ ಕೆೆ ಹೋಟೆಲ್‌ಗಳಿಗೆ ಭೇಟಿ ನೀಡಿದ್ದ ಅವರು ನಮ್ಮ ಮೆಟ್ರೋದಲ್ಲೂ ಪ್ರಯಾಣ ಮಾಡಿದ್ದರು. ಬಳಿಕ ಸೋಮವಾರ (ಜು. 31) ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಥರಹೇವಾರಿ ತಿಂಡಿ, ತಿನಿಸುಗಳನ್ನು ಸವಿದಿದ್ದಾರೆ. ಜತೆಗೆ ಅಭಿಮಾನಿಗಳು, ಗ್ರಾಹಕರ ಜತೆ ಸಿನಿಮಾ ಪ್ರಚಾರ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net