

ಕನ್ನಡ ಚಿತ್ರರಂಗದಲ್ಲಿ ಒಂದೇ ಕಥೆಯನ್ನಿಟ್ಟುಕೊಂಡು ಮೂರು ಬಾರಿ ನಿರ್ವಣವಾದ ಚಿತ್ರ ‘ಭಕ್ತ ಪ್ರಹ್ಲಾದ’ ಒಂದೇ ಅಲ್ಲ. ಆ ಪಟ್ಟಿಗೆ ಸಂತ ಕಬೀರರ ಕುರಿತಾದ ಚಿತ್ರಗಳು ಸಹ ಸೇರುತ್ತವೆ. ಅದರಲ್ಲೂ ಒಂದು ವಿಶೇಷವೆಂದರೆ, ಡಾ. ರಾಜಕುಮಾರ್ ಮತ್ತು ಶಿವರಾಜಕುಮಾರ್ ಇಬ್ಬರೂ ಕಬೀರರ ಪಾತ್ರವನ್ನು ಮಾಡಿದ್ದಾರೆ. ಕನ್ನಡದಲ್ಲಿ ಮಹಾತ್ಮ ಕಬೀರರ ಜೀವನ, ಸಾಧನೆ ಮತ್ತು ಸಂದೇಶ ಇಟ್ಟುಕೊಂಡು ನಿರ್ವಣವಾದ ಮೊದಲ ಚಿತ್ರವೆಂದರೆ ಅದು ‘ಮಹಾತ್ಮ ಕಬೀರ’.
40ರ ದಶಕದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕಬೀರರ ಪಾತ್ರವನ್ನು ಸುಬ್ಬಯ್ಯ ನಾಯ್ಡು ಮಾಡಿದ್ದರು. ಆ ನಂತರ 60ರ ದಶಕದಲ್ಲಿ ಮತ್ತೊಮ್ಮೆ ‘ಮಹಾತ್ಮ ಕಬೀರ್’ ಚಿತ್ರವಾಗಿದ್ದು, ಆ ಚಿತ್ರದಲ್ಲಿ ಡಾ. ರಾಜಕುಮಾರ್ ನಟಿಸಿದ್ದರು. ಅದಾಗಿ ಮೂರು ದಶಕಗಳ ನಂತರ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ಶಿವರಾಜಕುಮಾರ್ ಸಹ ಕಬೀರರ ಪಾತ್ರ ಮಾಡಿದ್ದು ವಿಶೇಷವಾಗಿತ್ತು.
ಡಾ. ರಾಜಕುಮಾರ್ ಮತ್ತು ಶಿವರಾಜಕುಮಾರ್ ಇಬ್ಬರೂ ಕಣ್ಣಪ್ಪ ಪಾತ್ರವನ್ನು ಮಾಡಿದ್ದರು. ಅದನ್ನು ಹೊರತುಪಡಿಸಿದರೆ, ತಂದೆ-ಮಗ ಇಬ್ಬರೂ ಮಾಡಿರುವ ಇನ್ನೊಂದು ಪಾತ್ರವೆಂದರೆ, ಅದು ಕಬೀರರದ್ದು.