

ಜೂ. ಎನ್ಟಿಆರ್ ಮತ್ತು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ಸುದ್ದಿ ಕಳೆದ ಒಂದೂವರೆ ವರ್ಷದಿಂದ ಕೇಳಿಬರುತ್ತಲಿದೆ. ಆದರೆ, ಮಾಸ್ ಜೋಡಿಯ ಸಿನಿಮಾ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಆದರೆ, ಅಭಿಮಾನಿಗಳು ಮಾತ್ರ ಸಂಭ್ರಮದಲ್ಲಿದ್ದಾರೆ. ಏಕೆಂದರೆ, ಆ ಸಿನಿಮಾ ಹೇಗೆಲ್ಲ ಇರಲಿದೆ ಎಂದು ನಿತ್ಯ ಊಹಿಸಿಕೊಳ್ಳುತ್ತಿದ್ದಾರೆ. ಒಂದಲ್ಲ ಒಂದು ಗಾಸಿಪ್ ಮೂಲಕ ಕೌತುಕ ಹೆಚ್ಚಿಸುತ್ತಿದ್ದಾರೆ. ಇದೀಗ ಈ ಮಾಸ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಚಿತ್ರದ ಹೆಸರೂ ಅಷ್ಟೇ ಕುತೂಹಲ ಮೂಡಿಸಿದೆ. ಅದೇ ‘ರೇಡಿಯೇಷನ್’!
ಹೌದು, ತಾರಕ್ ಮತ್ತು ಪ್ರಶಾಂತ್ ನೀಲ್ ಜೋಡಿಯ ಚಿತ್ರಕ್ಕೆ ‘ರೇಡಿಯೇಷನ್’ ಎಂಬ ಶೀರ್ಷಿಕೆ ಇಡಲಾಗಿದೆಯೆಂದು ಟಾಲಿವುಡ್ನಲ್ಲಿ ಸುದ್ದಿ ಹರಿದಾಡುತ್ತಿದೆ. ‘ರೇಡಿಯೇಷನ್’ ಶೀರ್ಷಿಕೆ ಬಗ್ಗೆ ನಿರ್ದೇಶಕ ಪ್ರಶಾಂತ್ ಜನ್ಮದಿನದಂದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಅವರ ಜನ್ಮದಿನದಂದೇ ಸಣ್ಣ ಸುಳಿವು ಬಿಟ್ಟುಕೊಟ್ಟಿತ್ತು. ರೇಷಿಯೇಷನ್ ಸೂಟ್ನಲ್ಲಿ ಶೀಘ್ರದಲ್ಲಿ ಸಿಗೋಣ ಎಂದು ಟ್ವಿಟ್ ಮಾಡಿ ಶುಭ ಕೋರಿತ್ತು. ಅದರ ಆಧಾರದ ಮೇಲೆ ಇದೀಗ ಚಿತ್ರದ ಟೈಟಲ್ ರೇಡಿಯೇಷನ್ ಎಂಬುದು ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಆದರೆ, ಚಿತ್ರತಂಡ ಮಾತ್ರ ಈವರೆಗೂ ಟೈಟಲ್ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.
ಇನ್ನು ಸದ್ಯ ಆರ್ಆರ್ಆರ್ ಸಿನಿಮಾ ಶೂಟಿಂಗ್ನಲ್ಲಿ ಎನ್ಟಿಆರ್ ತೊಡಗಿಸಿಕೊಂಡಿದ್ದು, ಇತ್ತ, ಕೆಜಿಎಫ್ ಚಾಪ್ಟರ್ 2 ಚಿತ್ರದ ಕೆಲಸಗಳಲ್ಲಿ ಪ್ರಶಾಂತ್ ಬಿಜಿಯಾಗಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಕೆಜಿಎಫ್ 2 ಬಿಡುಗಡೆ ಬಳಿಕವೇ ಈ ಜೋಡಿಯ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. (ಏಜೆನ್ಸೀಸ್)