

ಇತ್ತೀಚೆಗಷ್ಟೇ ಬಾಲಿವುಡ್ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮನೆಯ ಮೂವರು ಕೆಲಸದವರಿಗೆ ಕರೊನಾ ಪಾಸಿಟಿವ್ ಪತ್ತೆಯಾಗಿತ್ತು. ಅದಾದ ಬಳಿಕ ಅಧಿಕೃತ ಪ್ರಕಟಣೆ ಹೊರಡಿಸಿದ್ದ ಬೋನಿ ಕಪೂರ್, ಮನೆ ಮತ್ತು ಮನೆಯಲ್ಲಿರುವವರ ಬಗ್ಗೆಯೂ ಹೇಳಿಕೊಂಡಿದ್ದರು. ತಮ್ಮಿಬ್ಬರು ಪುತ್ರಿಯರ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದ್ದರು. ಇದೀಗ ಮತ್ತೊಂದು ಸುದ್ದಿಯನ್ನು ನೀಡಿದ್ದಾರೆ ಬೋನಿ ಕಪೂರ್. ಅದೇನೆಂದರೆ, ಮೇ 22ಕ್ಕೆ ಪಾಸಿಟಿವ್ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಅವರ ಮನೆಯ ಮೂವರು ಕೆಲಸಗಾರರ ಕರೊನಾ ಪರೀಕ್ಷೆ ನೆಗೆಟಿವ್ ಬಂದಿದ್ದು, ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಅದನ್ನು ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ.
‘ಈ ಸುದ್ದಿಯನ್ನು ಹಂಚಿಕೊಳ್ಳಲು ಖುಷಿ ಎನಿಸುತ್ತಿದೆ. ನಾನು ಮತ್ತು ನನ್ನ ಇಬ್ಬರು ಮಕ್ಕಳ ಕೋವಿಡ್ ಪರೀಕ್ಷೆ ಮತ್ತೆ ನೆಗೆಟಿವ್ ಬಂದಿದೆ. ಮನೆಯ ಮೂವರು ಕೆಲಸಗಾರರ ವರದಿ ಪಾಸಿಟಿವ್ ಬಂದಿತ್ತು. ಇದೀಗ ಅವರೂ ಗುಣಮುಖರಾಗಿದ್ದು, ಅವರ ವರದಿಯೂ ನೆಗೆಟಿವ್ ಬಂದಿದೆ. ನಮ್ಮ 14 ದಿನಗಳ ಕ್ವಾರಂಟೈನ್ ಅವಧಿ ಸಹ ಮುಗಿದಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ.
ಮನೆಯಲ್ಲಿ ಮೇಲಿಂದ ಮೇಲೆ ಮೂರು ಕರೊನಾ ಪ್ರಕರಣ ಕಾಣಿಸಿಕೊಂಡಿದ್ದರಿಂದ ಸೋಂಕು ನಿಯಂತ್ರಣಕ್ಕೆ ಮತ್ತು ಅದರ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಬೋನಿ ಕಪೂರ್ ತೆಗೆದುಕೊಂಡಿದ್ದರು. ಈಗ ಆ ಕ್ರಮವನ್ನು ಕರೊನಾ ಹಾವಳಿ ನಿಲ್ಲುವವರೆಗೂ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)