ಫೋರ್ಬ್ಸ್ ಪಟ್ಟಿಯಲ್ಲಿ ಏಕೈಕ ಭಾರತೀಯ ಅಕ್ಷಯ್ ... ಕಳೆದ ವರ್ಷದ ಸಂಪಾದನೆ ಎಷ್ಟು?

Akshay Kumar - Final
Published on

ಫೋರ್ಬ್ಸ್ ​​ಸಂಸ್ಥೆಯು ಪ್ರತೀ ವರ್ಷ, ಜಗತ್ತಿನ 100 ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಸಮೀಕ್ಷೆ ನಡೆಸುತ್ತಿದೆ. ಕಳೆದ ವರ್ಷದ ಪಟ್ಟಿ ಬಿಡುಗಡೆಯಾಗಿದ್ದು, ಭಾರತದಿಂದ ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಮಾತ್ರ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ಸೆಲೆಬ್ರಿಟಿ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಕೆಲವು ವರ್ಷಗಳಿಂದ ಇದ್ದಾರೆ. ಆದರೆ, ಈ ವರ್ಷ ಅವರ ಸ್ಥಾನ ಬದಲಾಗಿದೆ. ಕಳೆದ ವರ್ಷ ಅಕ್ಷಯ್ ಕುಮಾರ್ ಸುಮಾರು 490 ಕೋಟಿ ಸಂಪಾದಿಸಿದ್ದರು. ಆದರೆ, ಈ ವರ್ಷ ಅಕ್ಷಯ್ 366 ಕೋಟಿ ಸಂಪಾದಿಸುವ ಮೂಲಕ 52ನೇ ಸ್ಥಾನಕ್ಕೆ ಜಾರಿದ್ದಾರೆ.

ಈ ಪಟ್ಟಿಯ ಮೊದಲ ಸ್ಥಾನದಲ್ಲಿರುವುದು ಮೇಕಪ್ ಮೊಘಲ್ ಎಂದೇ ಖ್ಯಾತರಾದ ಕೈಲಿ ಜೆನ್ನರ್. ಜೂನ್ 2019ರಿಂದ ಮೇ 2020ರವರೆಗೆ ಅವರ ಸಂಪಾದನೆ ಒಟ್ಟು 4,453 ಕೋಟಿಯಷ್ಟಿದ್ದು, ನಂತರದ ಸ್ಥಾನಗಳನ್ನು ಕೇಯ್ನ ವೆಸ್ಟ್, ರೋಜರ್ ಫೆಡರರ್, ಕ್ರಿಸ್ಟಿಯಾನೋ ರೊನಾಲ್ಡೋ, ಮೆಸ್ಸಿ, ಟೈಲರ್ ಪೆರ್ರಿ, ನೇಮರ್, ಹೋವರ್ಡ್ ಸ್ಟರ್ನ್, ಲೆಬ್ರಾನ್ ಜೇಮ್ಸ್, ಡಾನ್ ಜಾನ್ಸನ್ ಅಲಂಕರಿಸಿದ್ದಾರೆ.

ಇನ್ನು ಅಕ್ಷಯ್ ಕುಮಾರ್ ವಿಷಯಕ್ಕೆ ಬರುವುದಾದರೆ, ಅಮೇಜಾನ್ ಪ್ರೈಮ್ ವಿಡಿಯೋದ ‘ದಿ ಎಂಡ್’ ಎಂಬ ವೆಬ್ ಸೀರೀಸ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಅಕ್ಷಯ್ ಕುಮಾರ್ 75 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅವರ ಮುಂಬರುವ ಚಿತ್ರಗಳಾದ ‘ಬೆಲ್ ಬಾಟಮ್’ ಮತ್ತು ‘ಬಚ್ಚನ್ ಪಾಂಡೆ’ಯಲ್ಲಿ ಅಭಿನಯಿಸುವುದಕ್ಕೆ ತಲಾ 100 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ಜಾಹೀರಾತು, ನಿರ್ಮಾಣದಿಂದ ಅವರು, ಒಟ್ಟಾರೆ ಒಂದು ವರ್ಷದಲ್ಲಿ 366 ಕೋಟಿ ಸಂಪಾದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ 52ನೇ ಸ್ಥಾನದಲ್ಲಿದ್ದರೂ, ಜೆನ್ನಿರ್ ಲೊಪೆಜ್, ವಿಲ್ ಸ್ಮಿತ್, ಜಾಕಿ ಚಾನ್, ಆ್ಯಡಮ್ ಸ್ಯಾಂಡ್ಲರ್ ಮುಂತಾದ ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ್ದಾರೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net