

ಟಾಲಿವುಡ್ನಲ್ಲಿ ಸೂಪರ್ ಹಿಟ್ ಪಟ್ಟಿಗೆ ಸೇರಿದ್ದ ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಂಲೋ’ ಸಿನಿಮಾ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಸದ್ದಿಲ್ಲದೆ, ಈ ಸಿನಿಮಾ ಬಾಲಿವುಡ್ಗೆ ರಿಮೇಕ್ ಆಗಲು ಸಿದ್ಧತೆ ನಡೆಸುತ್ತಿದೆ. ಬಾಲಿವುಡ್ಗೆ ರಿಮೇಕ್ ಆಗಲಿದೆ ಎಂಬ ಸುದ್ದಿ ಲಾಕ್ಡೌನ್ಗೂ ಮುನ್ನ ಗೊತ್ತಿರುವ ಸಂಗತಿಯಾದರೂ, ಹಿಂದಿಯಲ್ಲಿ ಹೀರೋ ಯಾರು ಎಂಬಿತ್ಯಾದಿ ವಿವರಗಳು ಹೊರಬಿದ್ದಿರಲಿಲ್ಲ. ಇದೀಗ ಕೆಲ ಮೂಲಗಳ ಪ್ರಕಾರ ಅಲ್ಲು ಅರ್ಜುನ್ ನಿಭಾಯಿಸಿದ್ದ ಪಾತ್ರವನ್ನು ಬಾಲಿವುಡ್ನಲ್ಲಿ ರಣವೀರ್ ಸಿಂಗ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಹೌದು, ಈ ಹಿಂದೆ ಬಾಲಿವುಡ್ನಲ್ಲಿ ರಿಮೇಕ್ ಆಗಿದ್ದ ‘ಕಬೀರ್ ಸಿಂಗ್’ ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಅಶ್ವಿನ್ ವರ್ದೆ, ‘ಅಲಾ ವೈಕುಂಠಪುರಂಲೋ’ ಸಿನಿಮಾದ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದಾರೆ. ರಣವೀರ್ ಸಿಂಗ್ ಜತೆಗೆ ಮತ್ತೊಬ್ಬ ಯುವ ನಟ ಕಾರ್ತಿಕ್ ಆರ್ಯನ್ ಅವರನ್ನು ನಿರ್ಮಾಪಕರು ಗಮನದಲ್ಲಿಟ್ಟುಕೊಂಡಿದ್ದಾರಂತೆ. ಮೊದಲ ಪ್ರಾಶಸ್ತ್ಯವನ್ನು ರಣವೀರ್ಗೆ ನೀಡಿದ್ದು, ಅವರ ಕಾಲ್ಶೀಟ್ ಮತ್ತು ಬೇರೆ ಸಿನಿಮಾಗಳ ಜತೆಗಿನ ಶೂಟಿಂಗ್, ಕ್ಲ್ಯಾಷ್ ವಿಚಾರಗಳನ್ನು ನೋಡಿಕೊಂಡು ಮುಂದುವರಿಯಲಿದ್ದಾರಂತೆ. ಒಂದು ವೇಳೆ ರಣವೀರ್ ಸಿಗಲಿಲ್ಲ ಅಂದರೆ, ಕಾರ್ತಿಕ್ ಆರ್ಯನ್ ಅವರನ್ನು ಆಯ್ದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದಿದೆ. ಚಿತ್ರೀಕರಣೋತ್ತರ ಕೆಲಸಗಳಿಗೆ ಚಾಲನೆ ನೀಡಿದೆಯಾದರೂ, ಹೊಸ ಸಿನಿಮಾಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ. ಅದರಂತೆ ಈ ಸುದ್ದಿ ಒಂದು ವೇಳೆ ನಿಜವೇ ಆದರೆ, ಸಿಂಬಾ ಬಳಿಕ ಮತ್ತೊಂದು ಸೌತ್ ರಿಮೇಕ್ನಲ್ಲಿ ರಣವೀರ್ ನಟಿಸಿದಂತಾಗಲಿದೆ. (ಏಜೆನ್ಸೀಸ್)