

ಬೆಂಗಳೂರು: 'ಅಂಜದ ಗಂಡು', 'ಯಾರಿಗೆ ಸಾಲತ್ತೆ ಸಂಬಳ' ಮುಂತಾದ ಯಶಸ್ವಿ ಚಿತ್ರಗಳ ನಿರ್ಮಾಪಕರಾದ ಬಿ.ಎನ್.ಗಂಗಾಧರ್ ಈಗಲೂ ಸಕ್ರಿಯವಾಗಿ ಸಿನಿಮಾ ಮಾಡುತ್ತಲೇ ಇರುತ್ತಾರೆ. ಕಳೆದ ವರ್ಷ ಲಾಕ್ಡೌನ್ಗೂ ಮೊದಲೇ ಅವರು, 'ಜಿಗ್ರಿದೋಸ್ತ್' ಎಂಬ ಚಿತ್ರ ಮಾಡಿದ್ದು, ಆ ಚಿತ್ರ ಇದೇ ಸೆಪ್ಟೆಂಬರ್ 17ರಂದು ತೆರಗೆ ಬರಲಿದೆ. ಅಂದಹಾಗೆ, ಇದು ಅವರ 27ನೇ ಚಿತ್ರ.
ಇದನ್ನೂ ಓದಿ: ‘ತಾಜ್ ಮಹಲ್’ನ್ನು ಮೊದಲು ಟ್ರೇಲರ್ನಲ್ಲಿ ನೋಡಿ …
'ಜಿಗ್ರಿ ದೋಸ್ತ್' ಚಿತ್ರವನ್ನು ನಿರ್ದೇಶಿಸಿದವರು ನಟ-ನಿರ್ದೇಶಕ ಮೋಹನ್. ಗಂಗಾಧರ್ ಜತೆಗಿನ ಒಡನಾಟದ ಬಗ್ಗೆ ಮಾತನಾಡುವ ಮೋಹನ್, 'ನನಗೆ ಗಂಗಾಧರ್ ಅವರು ಸುಮಾರು ೨೨ ವರ್ಷಗಳ ಪರಿಚಯ. 'ಯಾರಿಗೆ ಸಾಲತ್ತೆ ಸಂಬಳ' ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ಆ ನಂತರ ಅವರ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದೆ. ಈಗ ಅವರದೇ ನಿರ್ಮಾಣದ ಇನ್ನೊಂದು ಚಿತ್ರ ನಿರ್ದೇಶನ ಮಾಡಿದ್ದೇನೆ. ಪ್ರಪಂಚದಲ್ಲಿ ಎಲ್ಲಾ ಸಂಬಂಧಗಳನ್ನು ನಮಗೆ ಅಪ್ಪ-ಅಮ್ಮ ಪರಿಚಯ ಮಾಡಿಕೊಟ್ಟರಷ್ಟೇ ತಿಳಿಯುತ್ತದೆ. ಆದರೆ, ನಾವು ಇಷ್ಟಪಟ್ಟು ಪಡೆಯುವ ಸಂಬಂಧವೆಂದರೆ ಅದು ಸ್ನೇಹ. ಹಾಗಾಗಿ, ಎಲ್ಲಕ್ಕಿಂತ ಮೀರಿದ್ದು ಸ್ನೇಹ. ಈ ವಿಷಯವನ್ನು ನಮ್ಮ ಚಿತ್ರದಲ್ಲಿ ಹೇಳಿದ್ದೇವೆ' ಎನ್ನುತ್ತಾರೆ.
ಚಿತ್ರದ ಬಗ್ಗೆ ಮಾತನಾಡುವ ಬಿ.ಎನ್.ಗಂಗಾಧರ್, 'ನಾನು ಇಲ್ಲಿಯವರೆಗೂ ಇಪ್ತತ್ತೇಳು ಚಿತ್ರಗಳ ನಿರ್ಮಾಣ ಮಾಡಿದ್ದೇನೆ. ಕೋವಿಡ್ ಬರದಿದ್ದರೆ ಕಳೆದವರ್ಷ ನಮ್ಮ ಚಿತ್ರ ಬಿಡುಗಡೆ ಅಗಬೇಕಿತ್ತು. ಆದರೆ ಈಗ ಬಿಡುಗಡೆ ಮಾಡುತ್ತಿದ್ದೇವೆ' ಎನ್ನುತ್ತಾರೆ.
ಸ್ಕಂದ ಅಶೋಕ್ ಹಾಗೂ ಚೇತನ್ ಇಬ್ಬರೂ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷತ, ಸುಷ್ಮ ನಾಯಕಿಯರು. ಪಂಚಭಾಷಾ ನಟ ವಿನೋದ್ ಆಳ್ವ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಚಿತ್ಕಲಾ ಬಿರಾದಾರ್ , ಇಫ್ರಾನ್, ಮಂಜುನಾಥ್, ರಮೇಶ್ ಪಂಡಿತ್, ಟಿನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.ಪ್ರಸಾದ್ ಬಾಬು ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನಈ ಚಿತ್ರಕ್ಕಿದೆ.