ಕದ್ದ ಚಿತ್ರದ ಹಿಂದೆ: ಸೈಕಾಲಜಿಕಲ್ ಥ್ರಿಲ್ಲರ್​ನಲ್ಲಿ ವಿಜಯ ರಾಘವೇಂದ್ರ

Raghavendra
Published on

ಬೆಂಗಳೂರು: ಮೊದಲ ಲಾಕ್​ಡೌನ್ ಮುಗಿದ ಮೇಲೆ ಅದೆಷ್ಟು ಚಿತ್ರಗಳು ಸದ್ದಿಲ್ಲದೆ ಶುರುವಾಗಿದ್ದವೋ ಗೊತ್ತಿಲ್ಲ. ಅಂತಹ ಚಿತ್ರಗಳ ಪೈಕಿ ವಿಜಯ್ ರಾಘವೇಂದ್ರ ಅಭಿನಯದ ಹೊಸ ಚಿತ್ರವೂ ಒಂದು. ಈಗಾಗಲೇ ಶೇ. 70ರಷ್ಟು ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಆಗಿದೆ. ಚಿತ್ರದ ಹೆಸರೇನು ಗೊತ್ತಾ? ‘ಕದ್ದ ಚಿತ್ರ’.

ಹೆಸರೇನೋ ಬೇರೆ ತರಹ ಇದೆಯಲ್ಲ ಅಂತನಿಸಬಹುದು. ಕಥೆ ಸಹ ಬೇರೆ ತರಹ ಇದೆ ಎನ್ನುತ್ತಾರೆ ನಿರ್ದೇಶಕ ಸುಹಾಸ್ ಕೃಷ್ಣ. ‘ಪಿ5’ ಎಂಬ ಚಿತ್ರ ನಿರ್ದೇಶಿಸಿ ಅದರ ಬಿಡುಗಡೆಗೆ ಕಾದಿರುವ ಸುಹಾಸ್, ಅದರ ಬಿಡುಗಡೆಗೂ ಮೊದಲೇ, ಈ ಚಿತ್ರವನ್ನು ಮುಕ್ತಾಯದ ಹಂತಕ್ಕೆ ತಂದಿದ್ದಾರೆ.

‘ಕದ್ದ ಚಿತ್ರ’ದ ಕುರಿತಾಗಿ ಮಾತನಾಡುವ ಅವರು, ‘ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ. ವಿಜಯ್ ರಾಘವೇಂದ್ರ ಇದುವರೆಗೂ ಮಾಡಿರುವ ಚಿತ್ರಗಳಿಗಿಂತ ವಿಭಿನ್ನ. ಅವರು ಈ ತರಹದ ಚಿತ್ರ ಮತ್ತು ಪಾತ್ರ ಮಾಡಿರಲಿಲ್ಲ. ಇಲ್ಲಿ ಅವರು ಬರಹಗಾರನ ಪಾತ್ರ ಮಾಡುತ್ತಿದ್ದಾರೆ. ಆತನ ಬರವಣಿಗೆ, ಕ್ರೖೆಮ್ ಸುತ್ತ ತಳುಕು ಹಾಕಿಕೊಂಡರೆ ಏನಾಗುತ್ತದೆ ಎಂಬುದು ಚಿತ್ರದ ಕಥೆ’ ಎನ್ನುತ್ತಾರೆ ಸುಹಾಸ್.

ವಿಜಯ್ ರಾಘವೇಂದ್ರಗೆ ನಾಯಕಿಯಾಗಿ ನಮ್ರತಾ ಸುರೇಂದ್ರನಾಥ್ ಜತೆಯಾಗಿದ್ದಾರೆ. ರಾಘು ಶಿವಮೊಗ್ಗ, ಬಾಲಾಜಿ ಮನೋಹರ್, ಬೇಬಿ ಆರಾಧ್ಯ ಮುಂತಾದವರಿದ್ದಾರೆ. ಬೆಂಗಳೂರು, ವಯನಾಡು ಹಲವೆಡೆ ಚಿತ್ರೀಕರಣ ನಡೆದಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದರ ಜತೆಗೆ, ಸಂದೀಪ್ ಎಚ್.ಕೆ ಜತೆಗೆ ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಸುಹಾಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net