

ಬೆಂಗಳೂರು: ಮಹಾಭಾರತದ ಉಪಕಥೆಯನ್ನ ಆಧಾರವಾಗಿಟ್ಟುಕೊಂಡು ಇದುವರೆಗೂ ಹಲವು ಚಿತ್ರಗಳು ನಿರ್ಮಾಣವಾಗಿವೆ. ಈ ಸಾಲಿಗೆ 'ಜೀವ್ನಾನೇ ನಾಟ್ಕ ಸಾಮಿ' ಸಹ ಒಂದು. 'ಕನ್ನಡತಿ' ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ಹಾಗೂ 'ಸರಿಗಮಪ'ದ ಶ್ರೀಹರ್ಷ ಈ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವವರು ರಾಜು ಭಂಡಾರಿ ರಾಜವರ್ತ. ಈ ಚಿತ್ರದ ಕುರಿತು ಮಾತನಾಡುವ ಅವರು, 'ಮಹಾಭಾರತದ ಉಪಕಥೆಯನ್ನು ಆಧರಿಸಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಡೆಯುವ ಕೆಲವು ವಿಷಯಗಳ ಬಗ್ಗೆ ಕಥಾವಸ್ತುವನಿಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡಿದ್ದೇವೆ . ಪಾಸಿಟಿವ್ ಹಾಗೂ ನೆಗಟಿವ್ ಆಲೋಚನೆಗಳನ್ನು ಎರಡು ಪಾತ್ರಗಳ ಮೂಲಕ ಹೇಳಹೊರಟಿದ್ದೇವೆ. ಕಿರಣ್ ರಾಜ್ ಹಾಗೂ ಶ್ರೀಹರ್ಷ ಈ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು.
ಇದೊಂದು ಸಂಪೂರ್ಣ ಮನರಂಜನಾ ಚಿತ್ರ ಎನ್ನುವ ಅವರು, 'ಸ್ವಲ್ಪ ಟ್ರಾಜಿಡಿ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ. ಇದೇ ಆಗಸ್ಟ್ 19 ಸಿನಿರಸಿಕರ ಮಡಿಲಿಗೆ ನಮ್ಮ ಚಿತ್ರ ಹಾಕುತ್ತಿದ್ದೇವೆ. ನೋಡಿ ಹರಸಿ' ಎಂದು ರಾಜು ಭಂಡಾರಿ ವಿನಂತಿಸುತ್ತಾರೆ.
ಕಿರಣ್ ರಾಜ್ಗೆ ಒಂದೊಳ್ಳೆಯ ತಂಡದಲ್ಲಿ ಕೆಲಸ ಮಾಡಿದ ಸಂತೋಷವಿದೆಯಂತೆ. 'ಕನ್ನಡತಿ' ಧಾರಾವಾಹಿಯ ಅಭಿಮಾನಿಗಳು ಈ ಚಿತ್ರವನ್ನೂ ನೋಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ತಮಗಿದೆ ಎನ್ನುತ್ತಾರೆ ಕಿರಣ್. ಇನ್ನು ಶ್ರೀಹರ್ಷ ಚಿತ್ರದಲ್ಲಿ ನಟಿಸಿರುವುದಷ್ಟೇ ಅಲ್ಲ, ಚಿತ್ರದಲ್ಲಿ ಒಂದು ಹಾಡನ್ನೂ ಹಾಡಿದ್ದಾರಂತೆ.
ತೆಲುಗು - ತಮಿಳು ಸಿನಿಮಾಗಳಲ್ಲಿ ನಟಿಸಿ, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿರುವ ಪವಿತ್ರ ಕೋಟ್ಯಾನ್ ಹಾಗೂ ಅನಿಕ ರಮ್ಯ ಈ ಚಿತ್ರದ ನಾಯಕಿಯರು. ರಾಜಶೇಖರ್ ಶಿರಹಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.