

ಬೆಂಗಳೂರು: ಕರೊನಾ ವೈರಸ್ ಎರಡನೇ ಅಲೆಯಿಂದ 75 ದಿನಗಳಿಗೆ ಮೊಟಕುಗೊಂಡಿದ್ದ ಬಿಗ್ಬಾಸ್ ಸೀಸನ್ 8 ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸುವ ಮೂಲಕ ರಿಯಾಲಿಟಿ ಶೋ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.
ಬಿಗ್ಬಾಸ್ ಶೋ ಉತ್ತಮವಾಗಿ ಮೂಡಿಬರುತ್ತಿದ್ದು, ಅಂತಿಮ ಘಟಕ್ಕೆ ಬಂದು ತಲುಪಿದೆ. ಮುಂದಿನ ವಾರ (ಆಗಸ್ಟ್ 8) ಫೈನಲ್ ಎಪಿಸೋಡ್ ನಡೆಯಲಿದ್ದು, ವಿನ್ನರ್ ಯಾರಾಗಲಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಮಂಜು ಪಾವಗಡ ಹಾಗೂ ಅರವಿಂದ್ ಕೆ.ಪಿ ನಡುವೆ ಜಿದ್ದಾಜಿದ್ದಿ ಇದೆ. ವೈಷ್ಣವಿ ಹೆಸರು ಕೂಡ ಕೇಳಿಬರುತ್ತಿದೆ. ಆದರೆ, ವಿನ್ನರ್ ಯಾರಾಗಲಿದ್ದಾರೆ ಎಂಬುದಕ್ಕೆ ಉತ್ತರ ಆಗಸ್ಟ್ 8ರಂದು ಗೊತ್ತಾಗಲಿದೆ.
ಶೋನಲ್ಲಿ ವಿನ್ನರ್ ಆದವರು ಟ್ರೋಫಿ ಜತೆಗೆ 50 ಲಕ್ಷ ರೂ. ನಗದು ಬಹುಮಾನವನ್ನು ಮನೆಗೆ ಹೊತ್ತೊಯ್ಯಲಿದ್ದಾರೆ. ಹಿಂದಿನ ಶೋಗಳಲ್ಲಿ ಸೂಟ್ಕೇಸ್ನಲ್ಲಿ ನಗದು ಬಹುಮಾನವನ್ನು ಕೊಟ್ಟು ಕಳುಹಿಸಲಾಗುತ್ತಿತ್ತು. ಇಷ್ಟೇ ಅಲ್ಲದೆ, ಪ್ರಾಯೋಜಕರಿಂದಲೂ ಹೆಚ್ಚಿನ ಬಹುಮಾನ ಸಿಗುತ್ತಿತ್ತು. ಆದರೆ, ಬಾರಿ ಕೆಲವು ಬದಲಾವಣೆಗಳಾಗಿವೆ ಎಂದು ತಿಳಿದುಬಂದಿದೆ.
ಕೆಲ ನಂಬಲಾರ್ಹ ಮೂಲಗಳ ಪ್ರಕಾರ ಈ ಬಾರಿ ಬಿಗ್ಬಾಸ್ ವಿಜೇತ ಸ್ಪರ್ಧಿ 50 ಲಕ್ಷ ರೂಪಾಯಿಗಿಂತ ಕಡಿಮೆ ಹಣವನ್ನು ಟ್ರೋಫಿಯ ಜತೆಗೆ ಬಹುಮಾನವಾಗಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇವುಗಳ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ. (ಏಜೆನ್ಸೀಸ್)