ಮುಂದಿನ ವರ್ಷ ಪ್ರಯಾಣ ಹೊರಡಲಿದ್ದಾರೆ ಪ್ರಿಯಾಂಕಾ, ಆಲಿಯಾ ಮತ್ತು ಕತ್ರಿನಾ ...

Jee Le Zaraa
Published on

ಮುಂಬೈ: ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್​ ಮತ್ತು ಕತ್ರಿನಾ ಕೈಫ್​ ಮೂವರೂ 'ಜೀ ಲೇ ಜರಾ' ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಕೇಳಿ ಬಂದು ಎರಡು ವರ್ಷಗಳಾಗಿವೆ. ಆದರೆ, ಚಿತ್ರ ಶುರುವಾಗುವ ಮಾತೇ ಇಲ್ಲ. ಶುರುವಾಗುವುದು ಇರಲಿ. ಪ್ರಿಯಾಂಕಾ ಒಂದೇ ಒಂದು ದಿನಕ್ಕೂ, ಹೌದು ಈ ಚಿತ್ರದಲ್ಲಿ ನಟಿಸುತ್ತಿದ್ದೀನಿ ಎಂದು ಹೇಳಿಕೊಂಡಲ್ಲ. ಹಾಗಾಗಿ, ಈ ಚಿತ್ರ ಶುರುವಾಗುವುದು ನಿಜವೋ ಅಥವಾ ಬಾಲಿವುಡ್​ನ ನೂರೆಂಟು ಗಾಳಿಸುದ್ದಿಗಳ ಪೈಕಿ ಇದೂ ಒಂದೋ ಎಂಬ ಸಂಶಯ ಎಲ್ಲರಲ್ಲೂ ಇತ್ತು.

ಆದರೆ, ಇದು ಗಾಳಿಸುದ್ದಿಯಲ್ಲ, ನಿಜವಾದ ಸುದ್ದಿ ಎಂದು ಪ್ರಿಯಾಂಕಾ ಚೋಪ್ರಾ ಕೊನೆಗೂ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ, ಮುಂದಿನ ವರ್ಷ ಈ ಚಿತ್ರ ಶುರುವಾಗವ ಸಾಧ್ಯತೆ ಇದೆ ಎಂದು ಹಿಂಟ್​ ಕೊಟ್ಟಿದ್ದಾರೆ. ಎಲ್ಲಕ್ಕಿಂತ ಇನ್ನೊಂದು ಸ್ವಾರಸ್ಯವೇನು ಗೊತ್ತಾ? ಈ ಚಿತ್ರ ಶುರುವಾಗುವುದಕ್ಕೆ ಅವರೇ ಕಾರಣರಂತೆ. ಹಾಗಂತ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನಮ್ಮ ಸಮಾದಜದಲ್ಲಿ ಪುರುಷರಿಗೆ ಮೊದಲ ಪ್ರಾಶಸ್ತ್ಯ. ಚಿತ್ರರಂಗ ಸಹ ಇದಕ್ಕಿಂತ ವಿಭಿನ್ನವಾಗೇನೂ ಇಲ್ಲ. ಇಲ್ಲಿ ಹೀರೋಗಳೇ ಎಲ್ಲವನ್ನೂ ನಿರ್ಧರಿಸುತ್ತಾರೆ. ಒಂದು ಚಿತ್ರದ ಚಿತ್ರೀಕರಣ ಎಲ್ಲಿ ಮಾಡಬೇಕು, ಚಿತ್ರದಲ್ಲಿ ಯಾರೆಲ್ಲಾ ಇರಬೇಕು ಮುಂತಾದ ವಿಷಯಗಳನ್ನು ತೀರ್ಮಾನಿಸುತ್ತಾರೆ. ಈಗ ಕಾಲ ಬದಲಾಗಿದೆ. ಪುರುಷರ ದೃಷ್ಟಿಕೋನದ ಚಿತ್ರಗಳಂತೆ, ಮಹಿಳೆಯರ ದೃಷ್ಟಿಕೋನದ ಚಿತ್ರಗಳು ಯಾಕಿರಬಾರದು ಎಂದನಿಸಿತು. ಹಾಗನಿಸುತ್ತಿದ್ದಂತೆಯೇ ಆಲಿಯಾ ಮತ್ತು ಕತ್ರಿನಾಗೆ ಫೋನ್​ ಮಾಡಿದೆ. ಚಿತ್ರದಲ್ಲಿ ಅವರೆಲ್ಲ ನಟಿಸುವುದಕ್ಕೆ ಒಪ್ಪಿಕೊಂಡರು. ಹೀಗೆ ಚಿತ್ರ ಶುರುವಾಯಿತು' ಎನ್ನುತ್ತಾರೆ ಪ್ರಿಯಾಂಕಾ.

ಮಹಿಳೆಯರ ದೃಷ್ಟಿಕೋನ ತೋರಿಸುವಂತಹ ಒಂದು ಚಿತ್ರವನ್ನು ಮಾಡುವ ನಿಟ್ಟಿನಲ್ಲಿ ಈ ಚಿತ್ರ ಹುಟ್ಟಿಕೊಂಡಂತೆ. 'ನಿಜ ಹೇಳಬೇಕೆಂದರೆ, ಅಲ್ಲಿಯವರೆಗೂ ಪೋಸ್ಟರ್​ಗಳಲ್ಲಿ ಪುರುಷರ ಮುಖಗಳೇ ಹೆಚ್ಚಿರುತ್ತಿದ್ದವು. ನಮ್ಮ ಕಾಲದಿಂದ ಮಹಿಳೆಯರು ಸಹ ಪೋಸ್ಟರ್​ನಲ್ಲಿ ಕಾಣಿಸಿಕೊಳ್ಳುವ ಕಾಲ ಶುರುವಾಯಿತು. ಮಹಿಳೆಯರ ಚಿತ್ರಗಳಿಗೆ ಮಾರುಕಟ್ಟೆ ಸೃಷ್ಟಿಯಾಗುವುದರ ಜತೆಗೆ, ಮಹಿಳೆಯರು ಸಹ ಪೋಸ್ಟರ್​ಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳತೊಡಗಿದರು. ಹಾಗಾಗಿ, ಸ್ನೇಹಿತರನ್ನು ಸೇರಿಸಿಕೊಂಡು ಒಂದು ಸಿನಿಮಾ ಮಾಡುವ ಆಸೆ ಇತ್ತು. ಆ ಆಸೆ ಈ ಚಿತ್ರದ ಮೂಲಕ ಈಡೇರುತ್ತಿದೆ. ಚಿತ್ರದ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷ ಶುರುವಾಗಲಿದೆ' ಎಂದು ಅವರು ಹೇಳಿಕೊಂಡಿದ್ದಾರೆ.

'ಜೀ ಲೇ ಜರಾ' ಒಂದು ಟ್ರಾವಲ್​ ಚಿತ್ರವಾಗಿದ್ದು, ಮೂವರು ಯುವತಿಯರು ಒಂದು ಜರ್ನಿ ಹೋಗುವ ಕಥೆ ಈ ಚಿತ್ರದಲ್ಲಿರಲಿದೆಯಂತೆ. ಈ ಚಿತ್ರವನ್ನು ಫರ್ಹಾನ್​ ಅಖ್ತರ್​ ನಿರ್ದೇಶನ ಮಾಡಲಿದ್ದು, ಬೇರೆಬೇರೆ ದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net