ಶೋಷಿತೆ ಸಿನಿಮಾಗೆ ಜಾನ್ವಿ ರಾಯಲ ನಾಯಕಿ; ಶಶಿಧರ ನಿರ್ದೇಶನದ ನೈಜಘಟನೆಯಾಧಾರಿತ ಚಿತ್ರ

shoshite
Published on

ಬೆಂಗಳೂರು: ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 2015ರಲ್ಲಿ ನಡೆದ ನೈಜಘಟನೆಯಾಧಾರಿತ ಚಿತ್ರ ‘ಶೋಷಿತೆ’. ಶೀರ್ಷಿಕೆ ಹೇಳುವಂತೆ ಇದೊಂದು ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಕುರಿತ ಸಿನಿಮಾ.

ಮೂಲತಃ ಇಂಜಿನಿಯರ್ ಆಗಿದ್ದು, ಈಗಾಗಲೇ ಕೆಲವು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಶಶಿಧರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದು, ಜತೆಗೆ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಸಿನಿಮಾದ ಬಗ್ಗೆ, ‘ಇದೊಂದು ಮಧ್ಯಮ ವರ್ಗದ ಹುಡುಗಿಯ ಕಥೆ. ಸಮಾಜದಲ್ಲಿ ಆಕೆ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾಳೆ ಎನ್ನುವುದೇ ಕಥೆ. ಜತೆಗೆ ಗೆಳೆತನ, ನಂಬಿಕೆ, ಮೋಸ ಇಂತಹ ಹಲವು ಸೂಕ್ಷ್ಮ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಶಶಿಧರ್. ‘ಊರ್ವಿ’, ‘ವಿಷ್ಣು ಸರ್ಕಲ್’ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ, ನಿರೂಪಕಿ ಜಾನ್ವಿ ರಾಯಲ ಈ ಚಿತ್ರಕ್ಕೆ ನಾಯಕಿಯಾಗಿದ್ದು, ‘ಕೆಜಿಎ್’ ಸಿನಿಮಾದಲ್ಲಿ ಕಾಣಿಸಿಕೊಂಡ ರೂಪ ರಾಯಪ್ಪ ಖಳನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಇವರ ಜತೆಗೆ ಪ್ರಶಾಂತ್, ದರ್ಶನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗಾಗಲೇ ಬೆಂಗಳೂರು, ಹೊಸಕೋಟೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪಡೆದಿರುವ ‘ಶೋಷಿತೆ’ ನವೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net