'ಜೈಲರ್ 2'ಗೆ ತಾತ್ಕಾಲಿಕ ಟೈಟಲ್ ಫಿಕ್ಸ್! ಈ ಎರಡು ಶೀರ್ಷಿಕೆಯಲ್ಲಿ ಒಂದು ಶೀಘ್ರದಲ್ಲೇ ಘೋಷಣೆ

WhatsApp Image 2024-04-13 at 11.29.27 AM
Published on

ತಮಿಳುನಾಡು: ಕಳೆದ ವರ್ಷ ತಮಿಳು ನಟ, ದಿಗ್ಗಜ, ಸೂಪರ್​ಸ್ಟಾರ್​ ರಜನಿಕಾಂತ್ ಅಭಿನಯದ ಬ್ಲಾಕ್​ಬಸ್ಟರ್​ 'ಜೈಲರ್'​ ಸಿನಿಮಾ ಸಿನಿಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೇ ಬಾಕ್ಸ್ ಆಫೀಸ್​ ಗಳಿಕೆಯಲ್ಲಿ ಧೂಳೆಬ್ಬಿಸಿತು. ಇದೀಗ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಚಿತ್ರದ ಸೀಕ್ವೆಲ್ ತಯಾರಿ ನಡೆಸುತ್ತಿದ್ದು, 'ಜೈಲರ್​ 2'ಗೆ ತಾತ್ಕಾಲಿಕ ಶೀರ್ಷಿಕೆಯೊಂದನ್ನು ಫಿಕ್ಸ್ ಮಾಡಿದ್ದಾರೆ.

'ಜೈಲರ್' ಚಿತ್ರದಲ್ಲಿ ಮಾಸ್​ ಹಾಡಾಗಿ ಎಲ್ಲರ ಗಮನಸೆಳೆದ 'ಹುಕುಮ್' ಹಾಡಿನ ಟೈಟಲ್​ ಅನ್ನೇ ನೆಲ್ಸನ್ ಈಗ ಜೈಲರ್​ 2 ಸಿನಿಮಾದ ತಾತ್ಕಾಲಿಕ ಶೀರ್ಷಿಕೆಯಾಗಿ ಇಟ್ಟಿದ್ದಾರೆ. ಜೂನ್‌ನಿಂದ ಹುಕುಮ್​ನ ಪೂರ್ವ ತಯಾರಿ ಕೆಲಸಗಳು ಪ್ರಾರಂಭವಾಗಲಿದ್ದು, ನಿರೀಕ್ಷೆಗೂ ಮೀರಿದ ಹೊಸತನವನ್ನು ತರಲು ಚಿತ್ರದ ತಯಾರಕರು ಸಜ್ಜಾಗಿದ್ದಾರೆ.

2023ರಲ್ಲಿ ನೆಲ್ಸನ್ ನಿರ್ದೇಶನದ 'ಜೈಲರ್' ಚಿತ್ರದ ಮೂಲಕ ರಜನಿಕಾಂತ್​ ತಮಿಳು ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿದರು. ಈ ಚಿತ್ರವು ತಮಿಳು ಚಿತ್ರರಂಗದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿದೆ. ಕಳೆದ ಕೆಲವು ತಿಂಗಳುಗಳಿಂದ, ಜೈಲರ್‌ನ ಮುಂದಿನ ಭಾಗದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿತ್ತು. ಆದರೆ, ನೆಲ್ಸನ್ ಈಗ ಆ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಜೈಲರ್​ 2 ಅಥವಾ ಹುಕುಮ್​ ಈ ಎರಡು ಟೈಟಲ್​ಗಳಲ್ಲಿ ಶೀಘ್ರವೇ ಒಂದನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸದ್ಯ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿದ್ದು, 2025ಕ್ಕೆ ಚಿತ್ರವನ್ನು ತೆರೆಗೆ ತರಲು ನೆಲ್ಸನ್​ ಯೋಜನೆ ಹಾಕಿಕೊಂಡಿದ್ದಾರೆ. ಆದರೆ, ಇದು ನಿರೀಕ್ಷಿಸಿದಂತೆ ಆಗಲಿದೆಯಾ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net