'ನವರಸನಾಯಕ' ಜಗ್ಗೇಶ್​ ಕೊಟ್ಟ ಕನ್ನಡ ಕರೆಗೆ ಸಿಕ್ಕ ಪ್ರತಿಕ್ರಿಯೆ ಇದು...

jpg
Published on

ಶುಕ್ರವಾರವಷ್ಟೇ ಕನ್ನಡದ ವಿಚಾರಕ್ಕೆ ಫೇಸ್​ಬುಕ್​ನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಅವರನ್ನು ಟ್ರೋಲಿಗರು ತರಾಟೆ ತೆಗೆದುಕೊಂಡಿದ್ದರು. ಬಳಸುವ ಭಾಷೆಯ ಬಗ್ಗೆ ನಟಿಗೆ ಕ್ಲಾಸ್​ ತೆಗೆದುಕೊಂಡಿದ್ದರು. ಅದಾದ ಬಳಿಕ ಸಂಜೆ ವೇಳೆ ವಿಡಿಯೋವೊಂದನ್ನು ಫೇಸ್​ಬುಕ್​ಗೆ ಹಾಕಿ ಕ್ಷಮೆಯಾಚಿಸಿದ್ದರು. ‘ಮುಚ್ಕೊಂಡ್​ ಕೆಲಸ ನೋಡ್ಕೋ’ ಎಂಬ ಹೇಳಿಕೆಗೆ ಸಮಜಾಯಿಷಿಯನ್ನೂ ನೀಡಿದ್ದರು. ಇದೆಲ್ಲ ತಾರಕಕ್ಕೆ ಹೋಗುತ್ತಿದ್ದಂತೆ ನಯನಾ ಆಡಿದ ಮಾತಿಗೆ ನವರಸ ನಾಯಕ ಜಗ್ಗೇಶ್​ ಸಹ ಪ್ರತಿಕ್ರಿಯಿಸಿದ್ದರು.

ಕನ್ನಡ, ನಾಡು ನುಡಿ ವಿಚಾರಕ್ಕೆ ಬಂದರೆ ನಟ ಜಗ್ಗೇಶ್ ಮೇಷ್ಟ್ರಾಗಿ ಬಿಡುತ್ತಾರೆ. ಸಿನಿಮಾ ಹಿನ್ನೆಲೆ ಅಥವಾ ಅವರ ವೈಯಕ್ತಿಕ ಜೀವನದ ಒಂದಷ್ಟು ನೈಜ ಕತೆಗಳನ್ನು ಆಗಾಗ ಫೇಸ್​ಬುಕ್​ನಲ್ಲಿ ಕನ್ನಡದಲ್ಲಿಯೇ ಪ್ರಕಟಿಸುತ್ತಾರೆ. ಅಭಿಮಾನಿಗಳಿಗೂ ಕನ್ನಡದಲ್ಲಿಯೇ ಟೈಪಿಸಿ ಎಂದು ಅವರು ಹೇಳಿದ್ದೂ ಉಂಟು. ಅದೇ ರೀತಿ ಜಾಲತಾಣದಲ್ಲಿ ಸಾಧ್ಯವಾದಷ್ಟು ಕನ್ನಡವನ್ನೇ ಬಳಸೋಣ. ಕನ್ನಡ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು, ಕನ್ನಡದಲ್ಲೇ ಟ್ವಿಟ್​ ಮಾಡಿ ಎಂದಿದ್ದರು. ಅವರ ಆ ಕರೆಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ.

ಸಾಕಷ್ಟು ಅಭಿಮಾನಿಗಳು ಟ್ವಿಟರ್​ನಲ್ಲಿ ಇಂಗ್ಲಿಷ್​ನಲ್ಲಿದ್ದ ಹೆಸರನ್ನು ಕನ್ನಡದಲ್ಲಿ ಬರೆದುಕೊಂಡು, ಜಗ್ಗೇಶ್​ ಅವರ ಗಮನಕ್ಕೆ ತರುತ್ತಿದ್ದಾರೆ. ‘ಕನ್ನಡವನ್ನು ಇನ್ನಷ್ಟು ಸಿರಿವಂತಗೊಳಿಸುವ ಅಭಿಯಾನಕ್ಕೆ ಕರೆ ನೀಡಿದ್ದೀರಿ..ಸರ್ ನಿಜಕ್ಕೂ ಅದ್ಭುತ.. ಅದರಲ್ಲೂ ಈ ಸಂದರ್ಭ ಹೇಳಿ ಮಾಡಿಸಿದಂತಿದೆ..ಸರಿಯಾಗಿ ಸದ್ಭಳಕೆಯಾದ್ರೆ ಕನ್ನಡಮ್ಮ ಫುಲ್ ಖುಷ್...’ ಎಂಬಿತ್ಯಾದಿ ಕಮೆಂಟ್​ಗಳು ಜಗ್ಗೇಶ್​ ಅವರನ್ನು ತಲುಪುತ್ತಿವೆ.

‘ನಿಮ್ಮನಟನೆ ಮೆಚ್ಚಿ ಗುಬ್ಬಚ್ಚಿ ಗೂಡಿಗೆ ನಿಮ್ಮನ್ನರಸಿ ಬಂದು ನಿಮ್ಮ ಕನ್ನಡಾಭಿಮಾನ ಮೆಚ್ಚಿ ಇಂದು ಸಂಪೂರ್ಣವಾಗಿ ಕನ್ನಡದಲ್ಲೆ ಸಂವಹನ ಮಾಡ್ತಿದ್ದೀನಿ ಸರ್.. ನಿಮ್ಮಲ್ಲಾ ಹಿತವಚನಗಳ ಜೊತೆ ಈ ಕನ್ನಡ ಬರೆಯುವ ಅಭಿಯಾನದ ಆರಂಭ ಕೊಟ್ಟಿದೀರಾ ..ಯಶಸ್ಸು ಕೂಡ ಆಗಿದೆ .. ಬರೆಯಲು ಓದಲು ಮಾತನಾಡಲು ಎಲ್ಲೆಲ್ಲೂ ಕನ್ನಡವಿರಲಿ ಸರ್’ ಕಮೆಂಟ್​ಗಳು ಹರಿದು ಬರುತ್ತಿದ್ದು, ಸ್ವತಃ ಜಗ್ಗೇಶ್​ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ಧನ್ಯವಾದ ಜಾಲತಾಣ ಯುವಮಿತ್ರರಿಗೆ..ಕನ್ನಡ ಯ್ಯಾಪ್ ಬಳಸಿ ಕನ್ನಡದಲ್ಲೆ ಅಚ್ಚುಮಾಡಿ ಎಂಬ ನನ್ನವಿನಂತಿಗೆ ಸಾವಿರಾರು ನನ್ನಟ್ವಿಟ್ಟರ್ ಖಾತೆಯ ಯುವಮಿತ್ರರು ಕನ್ನಡಯ್ಯಾಪ್ ಬಳಸಲು ಆರಂಭಿಸಿ ನನಗೆ ತಿಳಿಸುತ್ತಿದ್ದಾರೆ..ಹೃದಯತುಂಬಿಬಂತು ನಿಮ್ಮ ಪ್ರೀತಿಗೆ..ಹಾಗು ನಿಮ್ಮ ಬಗ್ಗೆ ವಿಶೇಷ ಗೌರವು ಬಂತು..ಧನ್ಯವಾದ ಪ್ರೀತಿಗೆ.. ಶುಭಮಸ್ತು..’ ಎಂದು ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net