ಧನಂಜಯ & ಜಗ್ಗೇಶ್​ ಜುಗಲ್​ಬಂದಿ : ಆ. 11ರಂದು "ತೋತಾಪುರಿ 2' ಸಿನಿಮಾ ರಿಲೀಸ್​

123-1-3
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವಿಜಯ್​ ಪ್ರಸಾದ್​ ನಿರ್ದೇಶನದ ಜಗ್ಗೇಶ್​, ಅದಿತಿ ಪ್ರಭುದೇವ ನಟಿಸಿದ್ದ "ತೋತಾಪುರಿ' ಕಳೆದ ಸೆ. 30ರಂದು ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಅದರ ಸೀಕ್ವಲ್​ ರಿಲೀಸ್​ಗೆ ರೆಡಿಯಾಗಿದೆ. ಕೆಲವು ದಿನಗಳ ಹಿಂದಷ್ಟೇ ಭಿನ್ನ, ವಿಭಿನ್ನ ಪೋಸ್ಟರ್​ ಮೂಲಕ ಗಮನ ಸೆಳೆದಿದ್ದ ಚಿತ್ರತಂಡ, ಆ. 11ರಂದು "ತೋತಾಪುರಿ 2' ರಿಲೀಸ್​ ದಿನಾಂಕ ಅಂತಿಮಗೊಳಿಸಿದೆ. ಆ ಮೂಲಕ ಇನ್ನು ರಜಿನಿಕಾಂತ್​ ಅಭಿನಯದ ಪ್ಯಾನ್​ ಇಂಡಿಯಾ "ಜೈಲರ್​' ಮುಂದೆ ಕನ್ನಡದ "ತೋತಾಪುರಿ' ತಂಡ ತೋಳೇರಿಸಿದೆ.

ಸಿನಿಮಾ ಈಗಾಗಲೇ ಸೆನ್ಸಾರ್​ ಹಂತದಲ್ಲಿದ್ದು, 200ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು. ಇನ್ನು ಕೆಲವೇ ದಿನಗಳಲ್ಲಿ ಟ್ರೇಲರ್​ ಬಿಡುಗಡೆ ಮಾಡಲಿರುವ ವಿಜಯ್​ ಪ್ರಸಾದ್​ ಮತ್ತು ಟೀಮ್​, ರಿಲೀಸ್​ ಡೇಟ್​ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಮೊದಲ ಭಾಗದಲ್ಲಿ ಧಾರ್ಮಿಕ ಸೂಕ್ಷ್ಮತೆಗಳನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದರು ನಿರ್ದೇಶಕ ವಿಜಯ್​ ಪ್ರಸಾದ್​. ಹೀಗಾಗಿಯೇ ಸಂಭಾಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು.

ಆದರೆ, ಈ ಸೀಕ್ವಲ್​ನಲ್ಲಿ ಡೈಲಾಗ್ಸ್​ ಜತೆ ಜಗ್ಗೇಶ್​ ಮತ್ತು ಡಾಲಿ ಧನಂಜಯ ನಡುವಿನ ಜುಗಲ್​ಬಂದಿ ಹೈಲೈಟ್​ ಎನ್ನಲಾಗಿದೆ. ಜಗ್ಗೇಶ್​, ಅದಿತಿ, ಧನಂಜಯ ಜತೆ ದತ್ತಣ್ಣ, ವೀಣಾ ಸುಂದರ್​, ಸುಮನ್​ ರಂಗನಾಥ್​, ಹೇಮಾ ದತ್ತಾ ಪ್ರಮುಖ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net