

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಮೃತಾ ರಾಜ್, ಮೂಲತಃ ಚಿತ್ರದುರ್ಗದ ಹುಡುಗಿ. ಎಂಟನೇ ತರಗತಿಯಲ್ಲಿರುವಾಗಲೇ ಕಿರುಚಿತ್ರವೊಂದರಲ್ಲಿ ನಟಿಸಲು ಹೋಗಿ, ಸಿನಿಮಾಗೆ ಆಯ್ಕೆಯಾದವರು. ಹೀಗೆ "ಭರವಸೆ' ಎಂಬ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ ಬಳಿಕ ಈ ಹುಡುಗಿ ಮತ್ತೆ ಹಿಂದಿರುಗಿ ನೋಡಿಲ್ಲ. "ಲೇರಿಯಾ' ಮತ್ತು "ಗರಾಸಿ' ಎಂಬ ಲಂಬಾಣಿ ಸಿನಿಮಾಗಳಲ್ಲಿ ನಟಿಸಿದ ಅವರು ಕನ್ನಡದಲ್ಲೂ "ಧರ್ಮಪುರ', "ರುಧಿರ ಕಣಿವೆ', "ನವ ಇತಿಹಾಸ' ಚಿತ್ರಗಳಲ್ಲಿ ಮಿಂಚಿದ್ದಾರೆ. ""ಸಹಾರಾ' ಎಂಬ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಮೆಡಿಕಲ್ ವಿದ್ಯಾರ್ಥಿನಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. "ಶೇರ್' ಎಂಬ ಚಿತ್ರದ ಶೂಟಿಂಗ್ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅದರಲ್ಲಿ ನಾಯಕಿಯ ಅಕ್ಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ ಅಮೃತಾ.
ಕಾಲಿವುಡ್ನಲ್ಲಿ ಹ್ಯಾಟ್ರಿಕ್ ಚಿತ್ರಗಳು
ಕನ್ನಡದ ಜತೆ ತಮಿಳಿನಲ್ಲೂ ಅಮೃತಾ ರಾಜ್ ಬಿಜಿಯಾಗಿದ್ದಾರೆ. "ಲಾಕ್ಡೌನ್ಗೂ ಮುನ್ನ ತಮಿಳಿನಿಂದ ಕರೆ ಮಾಡಿ ಮೊದಲು "ವೀರ ಮಗಳ' ಎಂಬ ಚಿತ್ರದಲ್ಲಿ ಅವಕಾಶ ನೀಡಿದರು. ನಂತರ "ಕಲುವು ಚೂತಿರಾ' ಎಂಬ ಚಿತ್ರದಲ್ಲಿ ಪೊಲೀಸ್ ಆಗಿ ಹಾಗೂ "ಆಪ್ತಬಾಂಧವನ್' ಎಂಬ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಜತೆಗೆ ನಾಲ್ಕನೇ ಚಿತ್ರದ ಮಾತುಕತೆಯೂ ನಡೆಯುತ್ತಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ ಅವರು.
ಕ್ಯಾರಕ್ಟರ್ ಪಾತ್ರಗಳು ಇಷ್ಟ
ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಹೊಸತರಲ್ಲಿ ನಾಯಕಿಯಾಗಿಯೇ ನಟಿಸಬೇಕು ಅಂತಿದ್ದರಂತೆ ಅಮೃತಾ. "ಆದರೆ ಪಾತ್ರ ಚೆನ್ನಾಗಿದ್ದರೆ ಕ್ಯಾರಕ್ಟರ್ ರೋಲ್ಗಳ ಮೂಲಕವೂ ಗುರುತಿಸಿಕೊಳ್ಳಬಹುದು ಅಂತ ಮನವರಿಕೆ ಆಯಿತು. ಹೀಗಾಗಿಯೇ ಎಲ್ಲ ಪಾತ್ರಗಳನ್ನೂ ಸವಾಲಾಗಿಯೇ ಸ್ವೀಕರಿಸುತ್ತೇನೆ. ಸದ್ಯ ಐದು ಸಿನಿಮಾಗಳಿವೆ. ಇದುವರೆಗಿನ ಸಿನಿಮಾ ಪಯಣ ತುಂಬ ಚೆನ್ನಾಗಿದೆ. ನಿರೀಸಿದ ಪಾತ್ರಗಳು ದೊರೆಯುತ್ತಿವೆ. ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ನಟನೆ ಅಂದರೇನು ಅಂತಲೇ ಗೊತ್ತಿರಲಿಲ್ಲ. ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ' ಎಂದು ಖುಷಿಯಾಗುತ್ತಾರೆ ಅಮೃತಾ ರಾಜ್.