

ಬೆಂಗಳೂರು: ಬಹಳ ಸುದ್ದಿಯಲ್ಲಿದ್ದ ‘ವಿಕ್ರಾಂತ್ ರೋಣ’ ಚಿತ್ರದ ಹಾಡಿನ ಚಿತ್ರೀಕರಣ ಕೊನೆಗೂ ಮುಗಿದಿದೆ. ಚಿತ್ರೀಕರಣಕ್ಕೆಂದು ಬೆಂಗಳೂರಿಗೆ ಬಂದಿದ್ದ ಜಾಕ್ಲೀನ್ ಫರ್ನಾಂಡಿಸ್, ತಮ್ಮ ಕೆಲಸ ಮುಗಿಸಿ ವಾಪಸ್ಸು ಮುಂಬೈ ಫ್ಲೈಟ್ ಹತ್ತಿದ್ದಾರೆ. ಅಲ್ಲಿಗೆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೊಂದು ದಿನದ ಪ್ಯಾಚ್ವರ್ಕ್ ಕೆಲಸಗಳು ಮುಗಿದರೆ ಚಿತ್ರ ಸಂಪೂರ್ಣವಾದಂತೆ ಎಂಬ ಸಂದೇಶವೊಂದು ಚಿತ್ರತಂಡದಿಂದ ಬಂದಿದೆ. ಜಾಕ್ಲೀನ್ ಅಭಿನಯದ ಒಂದು ಹಾಡನ್ನು ಆರು ದಿನಗಳ ಕಾಲ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ. 300 ಡ್ಯಾನ್ಸರ್ಗಳು ಈ ಹಾಡಿನ ಭಾಗವಾಗಿದ್ದರಂತೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡಿಗೆ ಐದು ಕೋಟಿ ರೂ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ.
ಚಿತ್ರದಲ್ಲಿ ಜಾಕ್ಲೀನ್ ನಟಿಸಿದ್ದಾರೆ ಎನ್ನುವುದೇನೋ ಗೊತ್ತು. ಆದರೆ, ಅವರ ಪಾತ್ರವೇನು? ಈ ವಿಷಯವನ್ನು ಚಿತ್ರತಂಡದವರು ರಹಸ್ಯವಾಗಿಟ್ಟಿದ್ದಾರೆ. ಜಾಕ್ಲೀನ್ ಸಹ ಈ ವಿಷಯವನ್ನು ಬಹಿರಂಗಪಡಿಸಿಲ್ಲ. ಆದರೆ, ಚಿತ್ರದ ಬಗ್ಗೆ ಬಹಳ ಖುಷಿಯಿಂದ ಮಾತಾಡಿ ಹೋಗಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರಂತೆ. ಜಾಕ್ಲೀನ್ ಅವರ ಪಾತ್ರವು ಚಿತ್ರಕ್ಕೆ ಇನ್ನೊಂದು ಹೊಸ ಆಯಾಮ ಕೊಡುತ್ತದಂತೆ. ‘ಸದ್ಯಕ್ಕೆ ಅವರ ಪಾತ್ರವೇನು ಎಂಬುದನ್ನು ಬಿಟ್ಟು ಕೊಡುವುದಕ್ಕೆ ಸಾಧ್ಯವಿಲ್ಲದಿದ್ದರೂ, ಅವರಿಂದ ಚಿತ್ರಕ್ಕೊಂದು ಹೊಸ ಟ್ವಿಸ್ಟ್ ಸಿಗುತ್ತದೆ ಎಂದಷ್ಟೇ ಈ ಕ್ಷಣಕ್ಕೆ ಹೇಳಬಹುದು’ ಎನ್ನುತ್ತಾರೆ ನಿರ್ವಪಕ ಜಾಕ್ ಮಂಜು. ‘ವಿಕ್ರಾಂತ್ ರೋಣ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಚಿತ್ರವು 55ಕ್ಕೂ ಹೆಚ್ಚು ದೇಶಗಳಲ್ಲಿ 14 ಭಾಷೆಗಳಲ್ಲಿ 3ಡಿಯಲ್ಲಿ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿದೆ. ಇಲ್ಲಿಯವರೆಗೂ ಚಿತ್ರದ ಪೋಸ್ಟರ್ಗಳು ಮತ್ತು ಸ್ನೀಕ್ ಪೀಕ್ ಬಿಡುಗಡೆಯಾಗಿದ್ದು, ಸುದೀಪ್ ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 02) ಚಿತ್ರತಂಡದಿಂದ ಟೀಸರ್ ಬಿಡುಗಡೆಯಾಗುವ ನಿರೀಕ್ಷೆ ಇದೆ.