ನಾನು ಮಾತ್ರವಲ್ಲ ನನ್ನ ಪತಿ ಕೂಡ ಪ್ರೆಗ್ನೆಂಟ್​! ಬೇಬಿ ಬಂಪ್​ ಫೋಟೋ ಹಂಚಿಕೊಂಡ ಅಮಲಾ ಪೌಲ್​

Amala Paul 1
Published on

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್​ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್​ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್​ನ “ಮೈನಾ” ಚಿತ್ರ​ದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳ ಜೊತೆ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಮಲಾ, ಪ್ರತಿಯೊಂದು ವಿಚಾರವನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಾರೆ. ಅಮಲಾ ಒಂದು ರೀತಿಯಲ್ಲಿ ತೆರೆದ ಪುಸ್ತಕವಿದ್ದಂತೆ. ಅವರ ಬಗ್ಗೆ ಬಹುತೇಕ ಸಂಗತಿಗಳು ಎಲ್ಲರಿಗೂ ತಿಳಿದಿದೆ. 2014ರಲ್ಲಿ ಅಮಲಾ, ತಮಿಳು ನಿರ್ದೇಶಕ ಎ.ಎಲ್. ವಿಜಯ್ ಮದುವೆಯಾಗಿದ್ದರು. ಆದರೆ, ಮೂರು ವರ್ಷಗಳಲ್ಲೇ ಇಬ್ಬರ ನಡುವೆ ಬಿರುಕುಂಟಾಗಿ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 2019ರಲ್ಲಿ ಚೆನ್ನೈ ಮೂಲದ ವೈದ್ಯೆ ಡಾ. ಐಶ್ವರ್ಯಾರನ್ನು ವರಿಸಿದ ವಿಜಯ್, ಹೊಸ ಜೀವನ ಪ್ರಾರಂಭಿಸಿದರು. ಈಗ ಈ ಜೋಡಿಗೆ ಮೂರು ವರ್ಷದ ಮುದ್ದಾದ ಗಂಡು ಮಗುವಿದೆ.

ವಿಜಯ್ ಅವರಿಂದ ವಿಚ್ಛೇದನ ಪಡೆದ ಬಳಿಕ ಅಮಲಾ ಮತ್ತೆ ಸಿನಿಮಾಗಳಲ್ಲಿ ಬಿಜಿಯಾದರು. ಇದರ ನಡುವೆ ಕಳೆದ ಅಕ್ಟೋಬರ್​ 26ರಂದು 32ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಮಲಾ, ಅದೇ ದಿನ ತಮ್ಮ ಬಾಯ್​ಫ್ರೆಂಡ್ ಜಗತ್​ ದೇಸಾಯಿ ಅವರನ್ನು​ ಪರಿಚಯಿಸುವ ಮೂಲಕ ತಾವು ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವುದನ್ನು ಅಧಿಕೃತವಾಗಿ ಬಹಿರಂಗಪಡಿಸಿದರು. ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಕೆಲಸ ಮಾಡುವ ಜಗತ್​ ದೇಸಾಯಿ ಜತೆ ಅಮಲಾ ಕಳೆದ ನವೆಂಬರ್​ 5ರಂದು ಹಸೆಮಣೆ ಏರಿದರು.

ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವ ಅಮಲಾ, ಗೆಳೆಯ ಜಗತ್ ದೇಸಾಯಿ ಜೊತೆ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅಮಲಾ ಅವರ ತಮ್ಮ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಒಂದನ್ನು ನೀಡಿದ್ದರು. ಬೇಬಿ ಬಂಪ್​ ಫೋಟೋ ಶೇರ್​ ಮಾಡುವುದರ ಜತೆಗೆ 1+1 ನಿನ್ನೊಂದಿಗೆ 3 ಆಗಿದೆ ಎಂಬುದು ನನಗೀಗ ತಿಳಿದಿದೆ ಅಂತಾ ಬರೆದುಕೊಂಡು ಗರ್ಭಿಣಿಯಾಗಿರುವ ಸಂಗತಿಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಮಲಾ ಗರ್ಭಿಣಿಯಾಗಿರುವ ಸುದ್ದಿ ತಿಳಿಯುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದರು.

ಹೊಸ ಪೋಸ್ಟ್​ ವೈರಲ್​ ತಾಜಾ ಸಂಗತಿ ಏನೆಂದರೆ, ಅಮಲಾ ಅವರು ಇನ್​​ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನಾನು ಮಾತ್ರವಲ್ಲ ನನ್ನ ಗಂಡನು ಕೂಡ ಪ್ರೆಗ್ನೆಂಟ್​ ಎನ್ನುವ ಮೂಲಕ ಅಮಲಾ ಎಲ್ಲರ ಹುಬ್ಬೇರಿಸಿದ್ದಾರೆ. ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಏನಿದೆ ಎಂದು ತಿಳಿಯುವುದಾದರೆ, ಒಟ್ಟು 3 ಫೋಟೋಗಳನ್ನು ಅಮಲಾ ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಅಮಲಾರನ್ನು ತಬ್ಬಿಕೊಂಡಿರುವ ಜಗತ್ ದೇಸಾಯಿ ಬೇಬಿ ಬಂಪ್​ ಮೇಲೆ ತಮ್ಮ ಕೈಗಳನ್ನು ಇರಿಸಿದ್ದಾರೆ. ಅವರ ಕೈಗಳ ಮೇಲೆ ಅಮಲಾ ತಮ್ಮ ಕೈಗಳನ್ನು ಇಟ್ಟಿದ್ದಾರೆ. ಇನ್ನೊಂದು ಫೋಟೋದಲ್ಲಿ ಕೇವಲ ಬೇಬಿ ಬಂಪ್​ ಮತ್ತು ಅದರ ಮೇಲೆ ತಾರಾದಂಪತಿ ಕೈಗಳನ್ನು ಇರಿಸಿರುವ ಚಿತ್ರಣ ಮಾತ್ರ ಇದೆ. ಆದರೆ, ಮೂರನೇ ಚಿತ್ರದಲ್ಲಿ ಜಗತ್​ ದೇಸಾಯಿ ಅವರು ಶರ್ಟ್​ ಬಿಚ್ಚಿದ್ದು, ಅಮಲಾ ಅವರು ಪತಿಯ ಹೊಟ್ಟೆಯ ಮೇಲೆ ತಮ್ಮ ಎಡಗೈಯನ್ನು ಇಟ್ಟಿದ್ದಾರೆ. ಗಂಡನೂ ಪ್ರೆಗ್ನೆಂಟ್​ ಫೋಟೋ ಪೋಸ್ಟ್​ ಮಾಡಿರುವ ಅಮಲಾ, ನಿಮಗೆ ಗೊತ್ತಾ? ಗರ್ಭಾವಸ್ಥೆಯ ಸಮಯದಲ್ಲಿ ಪತ್ನಿಯ ಹೊಟ್ಟೆಯಷ್ಟೇ ಗಂಡನ ಹೊಟ್ಟೆಯು ಸಹ ಬೆಳೆಯುತ್ತದೆ ಎಂಬುದನ್ನು ಸಂಶೋಧಕರು ಹೇಳಿದ್ದಾರೆ. ಮಿಥ್ಯವನ್ನು ಹೋಗಲಾಡಿಸುವ ಸಮಯವಿದು. ಕೇವಲ ಅವಳು ಮಾತ್ರ ಪ್ರೆಗ್ನೆಂಟ್​ ಅಲ್ಲ ಆದರೆ, ನಾವಿಬ್ಬರು ಪ್ರೆಗ್ನೆಂಟ್​. ಕ್ಷಮಿಸು ಗಂಡ! ಎಂದಿರುವ ಅಮಲಾ, ಈ ಕ್ರಾಂತಿಕಾರಿ ಪರಿಕಲ್ಪನೆಯೊಂದಿಗೆ ನೀವು ಒಪ್ಪುವುದಾದರೆ ಹೃದಯದ ಬಟನ್ ಅನ್ನು ಒತ್ತಿರಿ ಮತ್ತು ಕಾಮೆಂಟ್​ ಬಾಕ್ಸ್​ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ನೆಟ್ಟಿಗರಿಗೆ ಅಮಲಾ ಹೇಳಿದ್ದಾರೆ.

ಸದ್ಯ ಅಮಲಾ ಅವರ ಈ ಪೋಸ್ಟ್​ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. 2 ಲಕ್ಷಕ್ಕೂ ಅಧಿಕ ಮಂದಿ ಪೋಸ್ಟ್​ಗೆ ಲೈಕ್​ ಮಾಡಿದ್ದಾರೆ. ಸಾಕಷ್ಟು ಮಂದಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ಈ ಪೋಸ್ಟ್​ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಬಾಕ್ಸ್​ ಮೂಲಕ ನಮಗೆ ತಿಳಿಸಿ.

ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ, ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರ್ ಅವರ ಆಡಿಜೀವಿಥಂ ಸಿನಿಮಾದಲ್ಲಿ ಅಮಲಾ ನಾಯಕಿಯಾಗಿದ್ದು, ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net