ಹುಟ್ಟುವಾಗಲೇ ಮಗುವಿಗೆ ಬಿಳಿಕೂದಲು: ಹೆತ್ತ ತಾಯಿ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ...

Child Feature
Published on

ಬ್ರಾಸಿಲಿಯಾ: ಅನುವಂಶೀಯ ಕಾರಣದಿಂದ ಹುಟ್ಟುವಾಗಲೇ ಬಿಳಿಕೂದಲುಗಳನ್ನು ಹೊಂದಿರುವ ಎರಡು ವರ್ಷದ ಮಗು ಡಿಸ್ನಿ ವಿಲನ್​ ಪಾತ್ರದಾರಿ ಕ್ರುಯೆಲ್ಲ ಡಿ ವಿಲ್​ರಂತೆ ಕಾಣುತ್ತಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಬ್ರೆಜಿಲ್​ನ ಜೆರಿಕೊಕೊರಾ ನಿವಾಸಿ ಟಾಲ್ಯತಾ ಯುಸ್ಸೆಫ್​ ಅಜೀಜ್​ ವಿಯೆರಾ (43) ಎಂಬಾಂಕೆ 2018 ನವೆಂಬರ್​ ತಿಂಗಳಲ್ಲಿ ಮಯಾಹ್​ ಹೆಸರಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹುಟ್ಟುವಾಗಲೇ ಮಗುವಿನ ಮುಂದೆಲೆ ಕೂದಲು ಬಿಳಿಯ ಬಣ್ಣವಿದೆ. ಆದರೆ, ಇದರಿಂದ ಕುಟುಂಬಕ್ಕೇನೋ ಅಚ್ಚರಿಯಾಗಿಲ್ಲ. ಏಕೆಂದರೆ, ಟಾಲ್ಯತಾಳ ಅಜ್ಜ, ತಾಯಿ, ಆಂಟಿ ಮತ್ತು ಸೋದರ ಸಂಬಂಧಿಗಳು ಹುಟ್ಟುವಾಗಲೇ ಪೈಬಾಲ್ಡಿಸಮ್ (ಇದು ಅನುವಂಶೀಯ ಸ್ಥಿತಿಯಾಗಿದ್ದು, ಚರ್ಮದಲ್ಲಿ ಮೆಲನೊಸೈಟ್​ಗಳ ಕೊರತೆಯಿಂದಾಗಿ ಮೆಲನಿನ್ ಉತ್ಪತ್ತಿಯಾಗುವ ಚರ್ಮ ಮತ್ತು ಕೂದಲಿನ ಪ್ರದೇಶಗಳು ಸಾಮಾನ್ಯಕ್ಕಿಂತ ಹಗುರವಾಗಿ ಕಾಣುವಂತೆ ಮಾಡುತ್ತದೆ) ಸಮಸ್ಯೆ ಎದುರಿಸುತ್ತಿದ್ದಾರೆ.

ಇದೇ ಅನುವಂಶೀಯ ಗುಣ ಮಯಾಹ್​ನಲ್ಲೂ ಮುಂದುವರಿದಿದ್ದು, ವಿಭಿನ್ನ ಕೂದಲೇ ಆಕೆಗೆ ಒಳ್ಳೆಯ ಖ್ಯಾತಿಯನ್ನು ತಂದುಕೊಟ್ಟಿದೆ. ತನ್ನ ಬಗ್ಗೆ ಮಾತನಾಡಿರುವ ಟಾಲ್ಯತ ಶಾಲಾ ದಿನಗಳಲ್ಲಿ ನಾನು ನನ್ನ ಬಿಳಿಕೂದಲನ್ನು ಉಳಿದ ಕೂದಲಿನ ಹಿಂದೆ ಮರೆ ಮಾಚುತ್ತಿದ್ದೆ. ಇನ್ನೊಬ್ಬರು ನನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೋ ಎಂಬ ಚಿಂತೆಯಲ್ಲೇ ಮುಳುಗಿದ್ದೆ. ಆದರೆ ಕೆಲವರು ತನ್ನ ವಿಭಿನ್ನ ಕೂದಲಿನಲ್ಲೇ ಸೌಂದರ್ಯವನ್ನು ಕಂಡುಕೊಂಡಿದ್ದಾರೆಂದು ಅರಿವಾಯಿತು ಎಂದು ಟಾಲ್ಯತಾ ತಿಳಿಸಿದ್ದಾರೆ.

ಸದ್ಯ ಮಯಾಹ್​ಗೂ ಹುಟ್ಟುವಾಗಲೇ ಬಿಳಿಕೂದಲು ಬಂದಿರುವುದರಿಂದ ಆಕೆಯ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಮಯಾಹ್​ಳನ್ನು ಉತ್ತೇಜಿಸಲು ಮುಂದಾಗಿದ್ದಾರೆ. ಡಿಸ್ನಿ ವಿಲನ್​ ಕ್ರುಯೆಲ್ಲ ಡಿ ವಿಲ್​ ಶೈಲಿಯ ಕೇಶರಾಶಿ ಮಯಾಹ್​ಗೆ ಭಾರಿ ಪ್ರಚಾರ ತಂದುಕೊಟ್ಟಿದೆ.

ನಮ್ಮ ಕುಟುಂಬಕ್ಕೆ ಪೈಬಾಲ್ಡಿಸಮ್ ಅನುವಂಶೀಯವಾಗಿ ಬಂದಿದ್ದು, ಮಯಾಹ್​ಳಿಗೂ ಪೈಬಾಲ್ಡಿಸಮ್​ ಹೆಚ್ಚಿನ ಸಂಭವನೀಯತೆ ಇದೆ ಎಂದು ನಮಗೆ ಮೊದಲೇ ತಿಳಿದಿತ್ತು ಎಂದಿರುವ ಟಾಲ್ಯತಾ, ಹುಟ್ಟಿದಾಗಲೇ ಮಯಾಹ್ ಮುಂದೆಲೆಯಲ್ಲಿ​ ಅನೇಕ ಬಿಳಿಕೂದಲುಗಳನ್ನು ಹೊಂದಿದ್ದಳು. ಮಾರನೇ ದಿನ ಫೋಟೋಗ್ರಾಫರ್​ ಒಬ್ಬರನ್ನು ಕರೆಯಿಸಿ ಫೋಟೋಶೂಟ್​ ಮಾಡಿಸಿದೆವು. ಆಕೆಯ ಫೋಟೋ ಜಾಲತಾಣದಲ್ಲಿ ಹರಿದಾಡಿವೆ. ನನ್ನ ಹಿತೈಷಿಗಳು ಆಕೆಯನ್ನು ನೋಡಲೆಂದು ಮನೆಗೆ ಭೇಟಿ ನೀಡುತ್ತಿದ್ದು, ಅಪ್ಪಿ ಮುದಾಡುತ್ತಾರೆಂದು ಟಾಲ್ಯತಾ ಖುಷಿ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net