More

    100 ಅಪರಾಧಿಗಳಿಗೆ ಟ್ರಂಪ್ ಕ್ಷಮಾದಾನ?; ಅದ್ದೂರಿ ಮಿಲಿಟರಿ ವಿದಾಯಕ್ಕೆ ತಣ್ಣೀರೆರಚಿದ ಪೆಂಟಗನ್

    ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರದ ಕೊನೆಯ ಪೂರ್ಣ ದಿನ ಇಂದು. ಈ ದಿನ 100 ಅಪರಾಧಿಗಳಿಗೆ ಕ್ಷಮಾದಾನ ಮಾಡಲಿದ್ದಾರೆ ಎಂಬ ಸುದ್ದಿ ಗಮನಸೆಳೆದಿದೆ. ಈ ನಡುವೆ, ಅದ್ದೂರಿ ಸೇನಾ ವಿದಾಯ ಪಡೆಯಬೇಕೆಂಬ ಟ್ರಂಪ್ ಆಸೆಗೆ ಪೆಂಟಗನ್ ತಣ್ಣೀರೆರಚಿದೆ. ಹೀಗಾಗಿ ಶ್ವೇತಭವನ ಅವರನ್ನು ಹೇಗೆ ಬೀಳ್ಕೊಡಲಿದೆ ಎಂಬ ಕುತೂಹಲವೂ ಇದೆ.

    ಅಮೆರಿಕದ ಅಧ್ಯಕ್ಷ ಸ್ಥಾನದಲ್ಲಿದ್ದು ವಿಶಿಷ್ಟ ನಡವಳಿಕೆಗಳ ಮೂಲಕ ಜಗತ್ತಿನ ಗಮನಸೆಳೆದ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಇಂದು ಬಹುತೇಕ ಕೊನೆಗೊಳ್ಳುತ್ತಿದೆ. ಜೋ ಬೈಡೆನ್ ಪದಗ್ರಹಣ ಜನವರಿ 20ರಂದು ಮಧ್ಯಾಹ್ನ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿಯೇ ಟ್ರಂಪ್ ಶ್ವೇತಭವನಕ್ಕೆ ವಿದಾಯ ಹೇಳಲಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಅವರು ಬುಧವಾರ ಬೆಳಗ್ಗೆ 8 ಗಂಟೆಗೆಲ್ಲ (ಅಮೆರಿಕ ವೇಳೆ) ವಾಷಿಂಗ್ಟನ್ ಡಿಸಿಗೆ ಟಾಟಾ ಹೇಳಿ ಫ್ಲೋರಿಡಾದಲ್ಲಿರುವ ತಮ್ಮ ಮಾರ್-ಅ-ಲಾಗೊ ರೆಸಾರ್ಟ್ ತಲುಪಲಿದ್ದಾರೆ. ಏರ್​ಫೋರ್ಸ್ ಒನ್ ವಿಮಾನದಲ್ಲಿ ಅಧ್ಯಕ್ಷರೆಂಬ ನೆಲೆಯಲ್ಲಿ ಇದು ಅವರ ಕೊನೆಯ ಪ್ರಯಾಣವಾಗಿರಲಿದೆ.

    ಕ್ಷಮಾದಾನ ಮನವಿಗೆ ಸಹಿ: ವಿದಾಯ ಕೂಟದಲ್ಲಿ ಭಾಗವಹಿಸುವ ಮೊದಲು ಅಧ್ಯಕ್ಷ ಟ್ರಂಪ್ ಕೊನೆಯದಾಗಿ ತಮ್ಮ ಅಧಿಕಾರ ಬಳಸಿಕೊಂಡು 100 ಅಪರಾಧಿಗಳಿಗೆ ಕ್ಷಮಾದಾನ ನೀಡಲಿದ್ದಾರೆ. ಈ ಪೈಕಿ ಬಹುತೇಕರು ವೈಟ್ ಕಾಲರ್, ಹೈ ಪ್ರೊಫೈಲ್ ಅಪರಾಧಿಗಳು. ಇವರ ಪೈಕಿ ಆರೋಗ್ಯ ಸೇವಾ ಕಾರ್ಯದಲ್ಲಿ ವಂಚನೆ ಎಸಗಿ 2018ರಲ್ಲಿ ಜೈಲು ಪಾಲಾಗಿದ್ದ ಫ್ಲೋರಿಡಾದ ಪಾಲಂ ಬೀಚ್​ನ ಡಾ.ಸಾಲೊಮನ್ ಮೆಲ್​ಗನ್ ಕೂಡ ಒಬ್ಬರು. ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸಾಂಜೆ ಹೆಸರೂ ಪಟ್ಟಿಯಲ್ಲಿರುವುದಾಗಿ ಕೇಳಿಬಂದಿದೆ.

    ಸ್ವಯಂ ಕ್ಷಮಾದಾನ?: ಅಧ್ಯಕ್ಷ ಟ್ರಂಪ್ ಸ್ವಯಂ ಕ್ಷಮಾದಾನ ಮಾಡಿಕೊಂಡು, ತಮ್ಮ ಕುಟುಂಬದ ಸದಸ್ಯರಿಗೂ ಕ್ಷಮಾದಾನ ನೀಡುತ್ತಾರೆ ಎಂಬ ವದಂತಿ ಹರಡಿತ್ತು. ಆದರೆ, ಮೂಲಗಳ ಪ್ರಕಾರ ಇಂತಹ ಯಾವುದೇ ಯೋಜನೆಗಳನ್ನು ಟ್ರಂಪ್ ಹಾಕಿಕೊಂಡಿಲ್ಲ. ಅಂತಹ ಕ್ರಮ ತೆಗೆದುಕೊಂಡರೆ ನಿಜವಾಗಿಯೂ ಟ್ರಂಪ್ ತಪ್ಪಿತಸ್ಥರೆಂಬ ಭಾವನೆ ಬಂದುಬಿಡುವುದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ, ಕೊನೆಯ ಕ್ಷಣದಲ್ಲಿ ಅವರು ಇಂಥ ನಿರ್ಣಯ ತೆಗೆದುಕೊಂಡರೂ ಅಚ್ಚರಿ ಇಲ್ಲ ಎಂಬ ಮಾತೂ ಇದೆ.

    ಸಂವಿಧಾನದಲ್ಲಿ ಇದೆಯೇ ಅವಕಾಶ?

    ಸಂವಿಧಾನದಲ್ಲಿ ಸ್ವಯಂ ಕ್ಷಮಾದಾನದ ವಿಚಾರ ಪ್ರಸ್ತಾಪವಿದೆ. ಸ್ವಯಂ ಕ್ಷಮಾದಾನ ಪಕ್ಷಪಾತ ಧೋರಣೆ ಯದ್ದಾಗಿರುತ್ತದೆ. ಆದ್ದರಿಂದ ಅದು ಮಾನ್ಯವಲ್ಲ ಎಂಬ ಉಲ್ಲೇಖವಿದೆ. ಮಹಾಭಿಯೋಗ ಎದುರಿಸುತ್ತಿರುವ ಟ್ರಂಪ್ ಸ್ವಯಂ ಕ್ಷಮಾದಾನ ಕ್ರಮಕ್ಕೆ ಮುಂದಾದರೆ ಪರಿಣಾಮ ವ್ಯತಿರಿಕ್ತವಾಗಲಿದೆ ಎಂದು ಅಮೆರಿಕದ ಕಾನೂನು ಪ್ರಾಧ್ಯಾಪಕ ಡೇಲ್ ಕಾರ್ಪೆಂಟರ್ ಅಭಿಪ್ರಾಯಪಟ್ಟಿದ್ದಾರೆ. ಶ್ವೇತಭವನ ಬಿಟ್ಟ ನಂತರವೂ ತನಗೆ ಪ್ರಯೋಜನವಾಗಬಲ್ಲ ರೀತಿಯಲ್ಲೇ ಅಧ್ಯಕ್ಷ ಟ್ರಂಪ್ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಕ್ಷಮಾದಾನಕ್ಕೆ ಅಪರಾಧಿಗಳ ಆಯ್ಕೆಯಲ್ಲೂ ಇದು ವ್ಯಕ್ತವಾಗತೊಡಗಿದೆ. ಈ ರೀತಿ ಕ್ಷಮಾದಾನ ಪಡೆದವರೆಲ್ಲರೂ ಮುಂದೆ ನೆರವಿಗೆ ಬರಬಲ್ಲರು ಎಂಬ ಲೆಕ್ಕಾಚಾರ ಅವರದ್ದು.

    ಅಧ್ಯಕ್ಷೀಯ ಕ್ಷಮಾದಾನ ಎಂದರೆ..

    ಅಪರಾಧಿ ಎಂದು ಘೋಷಿಸಿದ ಬಳಿಕ ನಿರ್ದಿಷ್ಟ ಅವಧಿಯಲ್ಲಿ ಅಥವಾ ಶಿಕ್ಷೆ ಮುಕ್ತಾಯ ಬಳಿಕ ಉತ್ತಮ ನಡವಳಿಕೆಯನ್ನು ಪರಿಗಣಿಸಿ ಅಪರಾಧಿ ಸಲ್ಲಿಸಿದ ಕ್ಷಮಾದಾನದ ಮನವಿಯನ್ನು ಅಧ್ಯಕ್ಷರು ಪುರಸ್ಕರಿಸುವ ಪ್ರಕ್ರಿಯೆ. ಸಾಮಾನ್ಯವಾಗಿ ಈ ರೀತಿ ಕ್ಷಮಾದಾನ ಸಿಕ್ಕಾಗ ಅಪರಾಧಿ ಕಳೆದುಕೊಂಡ ವಿವಿಧ ಹಕ್ಕುಗಳನ್ನು ವಾಪಸ್ ಪಡೆಯುತ್ತಾನೆ. ಅಪರಾಧ ಕಳಂಕವನ್ನು ಒಂದು ಹಂತದ ತನಕ ಕಡಿಮೆ ಮಾಡುತ್ತದೆ. ಆದರೆ ಪೂರ್ತಿ ತೊಡೆದುಹಾಕುವುದಿಲ್ಲ. ಸ್ವಯಂ ಕ್ಷಮಾದಾನ ಎಂಬುದು ಬಗೆಹರಿಯದ ವಿಚಾರವಾಗಿದೆ. ವಾಟರ್​ಗೇಟ್ ಹಗರಣದ ವೇಳೆ ಅಧ್ಯಕ್ಷ ನಿಕ್ಸನ್ ಅವರ ವಕೀಲ, ಸ್ವಯಂ ಕ್ಷಮಾದಾನ ನೀಡಿದರೆ ಅದು ನ್ಯಾಯಬದ್ಧವಾಗಿರಲಿದೆ ಎಂದು ಅಭಿಪ್ರಾಯ ನೀಡಿದ್ದರು. ಆದರೆ, ಡಿಪಾರ್ಟ್​ವೆುಂಟ್ ಆಫ್ ಜಸ್ಟೀಸ್ 1974 ಆಗಸ್ಟ್ 5ರಂದು ಪ್ರಕಟಿಸಿರುವ ಮೆಮೋರಂಡಂ ಒಪಿನಿಯನ್ ಪ್ರಕಾರ, ಅಧ್ಯಕ್ಷ ಸ್ವಯಂ ಕ್ಷಮಾದಾನ ನೀಡುವಂತಿಲ್ಲ. ಅಧ್ಯಕ್ಷ ಬಿಲ್ ಕ್ಲಿಂಟನ್ ಮಹಾಭಿಯೋಗದ ಸಂದರ್ಭದಲ್ಲೂ ಈ ವಿಚಾರ ಚರ್ಚೆಗೊಳಗಾಗಿತ್ತು.

    ಸಶಸ್ತ್ರ ಪ್ರತಿಭಟನಾಕಾರರ ಆಗಮನ: ಬೈಡೆನ್ ಪದಗ್ರಹಣ ಸಮಾರಂಭಕ್ಕೆ ಇನ್ನೆರಡು ದಿನ ಇರುವಾಗಲೇ ಕ್ಯಾಪಿಟಲ್ ಹಿಲ್ ಮತ್ತು ಸ್ಟೇಟ್​ಹೌಸ್​ಗಳ ಸುತ್ತ ಸಣ್ಣ ಸಣ್ಣ ಗುಂಪುಗಳಲ್ಲಿ ಪ್ರತಿಭಟನಾಕಾರರು ಸೇರತೊಡಗಿದ್ದಾರೆ. ಕೆಲವರ ಕೈಯಲ್ಲಿ ರೈಫಲ್​ಗಳಿರುವುದು ಕಂಡುಬಂದಿದೆ. ಸಶಸ್ತ್ರ ದಂಗೆ ಸಂಭವನೀಯತೆ ಕುರಿತು ಎಫ್​ಬಿಐ ಈಗಾಗಲೇ ಎಚ್ಚರಿಸಿದೆ.

    ಚುನಾವಣೆ ನಂತರ ಮಾತಿಲ್ಲ: ಚುನಾವಣೆ ಮುಕ್ತಾಯದ ನಂತರದಲ್ಲಿ ನಿಯೋಜಿತ ಅಧ್ಯಕ್ಷ ಬೈಡೆನ್ ಜತೆಗೆ ಅಧ್ಯಕ್ಷ ಟ್ರಂಪ್ ಮಾತುಕತೆ ನಡೆಸಿಲ್ಲ. ಬೈಡೆನ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಜ.8ರಂದು ಘೋಷಿಸುವ ಮೂಲಕ ಸಾಂಪ್ರದಾಯಿಕವಾಗಿ ಅಧಿಕಾರ ಹಸ್ತಾಂತರಿಸುವ ಶತಮಾನದ ಸಂಪ್ರದಾಯಕ್ಕೆ ಟ್ರಂಪ್ ತಿಲಾಂಜಲಿ ಇರಿಸಿದ್ದಾರೆ.

    ಡಿಪಾರ್ಚರ್ ನೋಟ್ಸ್​ಗೂ ವಿದಾಯ?

    1989ರ ಜನವರಿಯಲ್ಲಿ ಅಂದಿನ ಅಧ್ಯಕ್ಷ ರೊನಾಲ್ಡ್ ರೇಗನ್ ತಮ್ಮ ಉತ್ತರಾಧಿಕಾರಿ ಜಾರ್ಜ್ ಡಬ್ಲ್ಯು ಬುಷ್ ಅವರಿಗೆ ಮೊಟ್ಟ ಮೊದಲ ಬಾರಿಗೆ ಅಧ್ಯಕ್ಷರ ವಿದಾಯ ಟಿಪ್ಪಣಿ ಅಥವಾ ಡಿಪಾರ್ಚರ್ ನೋಟ್ಸ್ ಬರೆದಿದ್ದರು. ಇದು ಶ್ವೇತಭವನದಲ್ಲಿನ ಅನುಭವಗಳಿಗೆ ಕೈಗನ್ನಡಿ ಹಿಡಿದಂತೆ ಇರುತ್ತಿತ್ತು. 32 ವರ್ಷಗಳಿಂದ ಸಾಗಿಬಂದಿರುವ ಈ ಟಿಪ್ಪಣಿಯನ್ನು ಟ್ರಂಪ್ ಅವರು ಬೈಡೆನ್​ಗೆ ಬರೆಯುವುದು ಸಂದೇಹವಾದ ಕಾರಣ ಈ ಸಂಪ್ರದಾಯ ಇಲ್ಲಿಗೆ ಕೊನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

    ಬೆಳ್ಳಂಬೆಳಗ್ಗೆಯೇ ವಿದಾಯಕೂಟ

    ಅಧ್ಯಕ್ಷ ಟ್ರಂಪ್ ಅವರನ್ನು ಬೀಳ್ಕೊಡುವುದಕ್ಕೆ ಶ್ವೇತಭವನದಲ್ಲಿ ಬೆಳ್ಳಂಬೆಳಗ್ಗೆಯೇ ವಿದಾಯಕೂಟ ಏರ್ಪಡಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ 7.15ರ ನಡುವೆ ಶ್ವೇತಭವನಕ್ಕೆ ಆಗಮಿಸುವಂತೆ ಅತಿಥಿಗಳಿಗೆ ಆಹ್ವಾನ ನೀಡುವಾಗಲೇ ಸೂಚಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಈ ಕಾರ್ಯಕ್ರಮದ ನಂತರ ಟ್ರಂಪ್ ಶ್ವೇತಭವನ ಬಿಡಲಿದ್ದಾರೆ. ಈ ವಿದಾಯಕೂಟ ಮೇರಿಲ್ಯಾಂಡ್​ನ ಜಾಯಿಂಟ್ ಬೇಸ್ ಆಂಡ್ರ್ಯೂಸ್​ನಲ್ಲಿ ಏರ್ಪಾಡಾಗಿದೆ.

    ಆಂತರಿಕ ದಾಳಿ ಭೀತಿ: ಕ್ಯಾಪಿಟಲ್ ಹಿಲ್ ಹಿಂಸಾಚಾರದ ಹಿನ್ನೆಲೆಯಲ್ಲಿ ಬೈಡೆನ್ ಪದಗ್ರಹಣದ ವೇಳೆ ಆಂತರಿಕ ದಾಳಿಯ ಆತಂಕವನ್ನು ರಕ್ಷಣಾ ಅಧಿಕಾರಿಗಳು ವ್ಯಕ್ತಪಡಿಸಿ ದ್ದಾರೆ. ಪದಗ್ರಹಣ ರಕ್ಷಣೆಗೆ ನಿಯೋಜಿತರಾದ 25,000 ನ್ಯಾಷನಲ್ ಗಾರ್ಡ್ ಸದಸ್ಯರ ವಿವರಗಳನ್ನೂ ಪರಿಶೀಲನೆಗೊಳಪಡಿಸಲಾಗಿದೆ. 2001ರ ಸೆ.11ರಂದು ಅಲ್ ಕೈದಾ ಉಗ್ರರು ಅಮೆರಿಕದೊಳಗಿನವರನ್ನೇ ಬಳಸಿಕೊಂಡು ದಾಳಿ ನಡೆಸಿದ್ದರು. ಈ ಮಾದರಿ ದಾಳಿಯನ್ನು ಅಲ್ಲಗಳೆಯಲಾಗದು ಎಂದಿದೆ ರಕ್ಷಣಾ ಇಲಾಖೆ.

    ಮಿಲಿಟರಿ ಫೇರ್​ವೆಲ್ ಇಲ್ಲ: ಸೇನೆಯ ಕಮಾಂಡರ್ ಇನ್ ಚೀಫ್ ಆಗಿರುವ ಅಧ್ಯಕ್ಷ ಟ್ರಂಪ್ ಮಿಲಿಟರಿ ಸ್ಟೈಲ್ ಫೇರ್​ವೆಲ್ ಪರೇಡ್ ಏರ್ಪಡಿಸುವಂತೆ ಮಾಡಿದ್ದ ಮನವಿಯನ್ನು ಪೆಂಟಗನ್ ತಿರಸ್ಕರಿಸಿದೆ. ಈ ಕಾರ್ಯಕ್ರಮಕ್ಕೆ ತನ್ನ ಬೆಂಬಲಿಗರಿಗೂ ಪ್ರವೇಶ ನೀಡಬೇಕೆಂದು ಟ್ರಂಪ್ ಬಯಸಿದ್ದರು. ಸಂಭಾವ್ಯ ಹಿಂಸಾಚಾರದ ಕಾರಣ ನೀಡಿ ಟ್ರಂಪ್ ಮನವಿಯನ್ನು ತಿರಸ್ಕರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts