More

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿ ಈಗ ಮದುವೆಯಾಗಲಾಗದೇ ಧರ್ಮಸಂಕಟದಲ್ಲಿದ್ದೇನೆ- ಏನು ಮಾಡಲಿ?

    ಪ್ರಶ್ನೆ:  ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿ ಈಗ ಮದುವೆಯಾಗಲಾಗದೇ ಧರ್ಮಸಂಕಟದಲ್ಲಿದ್ದೇನೆ- ಏನು ಮಾಡಲಿ?ನಾನು 25 ವರ್ಷದ, ಎಂಬಿಎ ಮಾಡಿ ಒಳ್ಳೆಯ ಕೆಲಸದಲ್ಲಿರುವ ಯುವಕ. ಈಗ್ಗೆ ಎರಡು ವರ್ಷದ ಹಿಂದೆ ನನ್ನ ಎಂಬಿಎ ಕ್ಲಾಸ್‍ಮೇಟ್ ಆಗಿದ್ದ ಹುಡುಗಿಯನ್ನು ಪ್ರೀತಿಸಿದೆ. ನಮ್ಮ ದೇಹಸಂಪರ್ಕವೂ ನಡೆದುಹೋಯಿತು. ಆಗಲೇ ಮನೆಯಲ್ಲಿ ಹೇಳೋಣವೆಂದರೆ ನನಗಿನ್ನೂ 23 ವರ್ಷವಾಗಿತ್ತು. ಅಲ್ಲದೆ, ನನ್ನ ಮಾಸ್ಟರ್ ಡಿಗ್ರಿ ಮುಗಿದು ಕೆಲಸ ಸಿಗುವವರೆಗೆ ನಾನು ಕಾಯಲೇಬೇಕಾಗಿತ್ತು. ಇದನ್ನೇ ನನ್ನ ಹುಡುಗಿಗೂ ಹೇಳಿದೆ. ಅವಳೂ ಒಪ್ಪಿದ್ದಳು. ಈಗ ಎರಡು ತಿಂಗಳ ಹಿಂದೆ ಇಬ್ಬರೂ ಮನೆಯಲ್ಲಿ ಹೇಳಿದೆವು. ಅವಳ ಮನೆಯವರೇನೋ ಹಾಗೂ ಹೀಗೂ ಒಪ್ಪಿದರು. ಆದರೆ ನಮ್ಮ ಮನೆಯಲ್ಲೇ ಜಾತಿ ಬೇರೆಯಾದ ಕಾರಣ ಒಪ್ಪಲೇ ಇಲ್ಲ.


    ಆದರೂ ಕಾಡಿ ಬೇಡಿ ನಮ್ಮಪ್ಪ ಅಮ್ಮನನ್ನು ಹುಡುಗಿ ನೋಡಲು ಅವರ ಮನೆಗೆ ಕಳಿಸಿದೆ. ಏಕೆಂದರೆ, ನಮ್ಮ ಜಾತಿಯಲ್ಲಿ ಗಂಡಿನ ಮನೆಯವರೇ ಹುಡುಗಿಯನ್ನು ನೋಡಲು ಅವರ ಮನೆಗೆ ಹೋಗಬೇಕು. ಆದರೆ, ಆ ಹುಡುಗಿ ಮನೆಯವರು ಅಷ್ಟೇನೂ ಆಸಕ್ತಿ ತೋರದೆ ಸುಮ್ಮನೆ ಮಾತಾಡಿಸಿ, ಒಂದು ಲೋಟ ನೀರನ್ನೂ ಕೊಡದೆ ಕಳಿಸಿದರು. ನಮ್ಮ ತಾಯಿಗೆ ತೀರಾ ಅವಮಾನವಾಯಿತು. ಅವರು ಈ ಹುಡುಗಿ ಬೇಡವೇ ಬೇಡ ಎಂದು ಹಠ ಹಿಡಿದು ಕೋಪದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಅವರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ಬಹಳ ಹೋರಾಡಿ ಉಳಿಸಿಕೊಂಡೆವು. ಅವರು ಆಸ್ಪತ್ರೆಯಲ್ಲಿ ಸಾವು ಬದುಕಿನ ಜೊತೆ ಹೋರಾಡುತ್ತಿರುವಾಗಲೂ ಹುಡುಗಿ ಮನೆಯವರಿರಲಿ, ಹುಡುಗಿ ಸಹ ಬಂದು ನೋಡಲಿಲ್ಲ.

    ಈಗ ಆ ಹುಡುಗಿ ನನ್ನ ಜೊತೆ ಫೋನಿನಲ್ಲಿ ದಿನಾ ಜಗಳ ಕಾಯುತ್ತಾಳೆ. `ನೀನು ನನಗೆ ಮೋಸ ಮಾಡಿದೆ, ನಿಮ್ಮ ಮನೆಬಿಟ್ಟು ಮೊದಲು ಹೊರಗೆ ಬಾ, ನಾವೇ ಮದುವೆಯಾಗಿ ಬೇರೆ ಮನೆ ಮಾಡೋಣ, ನಾನು ನನ್ನ ತಂದೆ ತಾಯಿಯನ್ನು ಬಿಟ್ಟು ಬರುತ್ತೇನೆ,
    ನೀನೂ ಬಿಟ್ಟು ಬಾ’ ಅನ್ನುತ್ತಾಳೆ. ನನ್ನ ತಾಯಿ ಸಾಯುತ್ತಿದ್ದಾಗಲೇ ಬಂದು ನೋಡದ ಇವಳು, ಮುಂದೆ ನನ್ನ ತಂದೆ ತಾಯಿಯರನ್ನು ನೋಡಿಕೊಳ್ಳುತ್ತಾಳೆ ಎಂದು ಹೇಗೆ ನಂಬಲಿ? ನನಗೆ ನನ್ನ ತಾಯಿ ಅಂದರೆ ಪ್ರಾಣ ಮೇಡಂ. ಅವರಿಗೆ ನಾನೊಬ್ಬನೇ ಮಗ. ಅವಳು ಹೇಳಿದ ಹಾಗೆ ಮಾಡಿದರೆ ನನ್ನಮ್ಮ ಸತ್ತೇ ಹೋಗುತ್ತಾರೆ. ಏನು ಮಾಡಲಿ? ದಿಕ್ಕೇ ತೋಚುತ್ತಿಲ್ಲ.

    ಉತ್ತರ: ನಿಮ್ಮ ಸಂಕಟ ನಿಜಕ್ಕೂ ಗಹನವಾದದ್ದು. ಇತ್ತ ದರಿ ಅತ್ತ ಪುಲಿ ಎಂಬಂತೆ ಆಗಿದೆ. ಆದರೆ ಇಷ್ಟು ವಿದ್ಯಾವಂತರಾದ ನಿಮಗೆ ಆ ಹುಡುಗಿಯ ಸ್ನೇಹ ಮಾಡುವಾಗ, ಅವಳ ಜೊತೆ ದೇಹಸಂಪರ್ಕ ಮಾಡುವಾಗ ನಿಮ್ಮ ತಾಯಿ ನೆನಪಿಗೆ ಬರಲೇ ಇಲ್ಲವೇ? ಪ್ರೇಮ ವಿವಾಹಕ್ಕೆ ಹಾತೊರೆಯುವ ಈಗಿನ ಯುವಜನತೆಯಲ್ಲಿ ಇದೊಂದು ನ್ಯೂನ್ಯತೆ ಕಾಣಿಸಿಕೊಳ್ಳುತ್ತಿದೆ. ಯಾವುದಾದರೂ ಹುಡುಗಿಗೆ ಪ್ರಪೋಸ್ ಮಾಡುವಾಗ `ಇದು ನಿಜಕ್ಕೂ ಯಶಸ್ವಿಯಾಗುತ್ತದೆಯೇ?

    ಈ ಪ್ರೀತಿ ನಿರಂತರವಾಗುತ್ತದೆಯೇ? ಇದು ಮದುವೆಯಲ್ಲಿ ಮುಗಿಯುತ್ತದೆಯೇ?’ ಎನ್ನುವ ಪ್ರಶ್ನೆಯನ್ನು ಇಬ್ಬರೂ
    ಕೇಳಿಕೊಂಡು ಅದಕ್ಕೆ ತಕ್ಕ ಉತ್ತರ ಸಿಕ್ಕಾಗ ಮಾತ್ರ ಮುಂದುವರಿಯಬೇಕಲ್ಲವೇ? ಪ್ರೀತಿಸಲು ಆತುರ, ದೇಹ ಸುಖ ಪಡೆಯಲು ಆತುರ, ಆ ನಂತರ ಹೆತ್ತವರನ್ನು ಮುಂದೆ ಮಾಡಿಕೊಂಡು ಮದುವೆಯ ಪ್ರಯತ್ನ ಮಾಡಲು ತೊಡಗುತ್ತೀರಿ! ಇದು ಮೂರ್ಖತನವಲ್ಲವೇ? ಪ್ರೀತಿಸಿದ ಮೇಲೆ ಮದುವೆ ಮಾಡಿಕೊಳ್ಳುವ ಜವಾಬ್ದಾರಿಯೂ ನಿಮ್ಮದೇ ಆಗಬೇಕಲ್ಲವೇ? `ನಾನು ಇಂಥ ಹುಡುಗಿಯನ್ನು ಇಂಥ ದಿನ ಮದುವೆ ಮಾಡಿಕೊಳ್ಳುತ್ತಿದ್ದೇನೆ.

    ನಿಮಗೆ ಮನಸ್ಸಿದ್ದರೆ ಬಂದು ಆಶೀರ್ವಾದ ಮಾಡಿ’ ಎಂದು ಹೇಳುವ ಎದೆಗಾರಿಕೆ ಇದ್ದವರು ಮಾತ್ರ ಪ್ರೀತಿ ಮಾಡಬೇಕು. ಅದು ಬಿಟ್ಟು ಪ್ರೀತಿ ಪ್ರೇಮ ಕಾಮ ಎಲ್ಲವೂ ಮುಗಿದ ಮೇಲೆ, ಜಾತಿಯ ಸಂಪ್ರದಾಯದಂತೆ ಹೆಣ್ಣನ್ನು ನೋಡಲು ತಂದೆ ತಾಯಿಯರನ್ನು ಹೆಣ್ಣಿನ ಮನೆಗೆ ಕಳಿಸುವುದು ಯಾವ ನ್ಯಾಯ? ಅಲ್ಲದೆ, ಆ ಹೆಣ್ಣಿನ ಮನೆಯವರು ಈ ಗಂಡು ಹೆತ್ತ ಮಹಾಮಹಿಮರನ್ನು ನಡೆಮುಡಿ ಹಾಸಿ ಸ್ವಾಗತಿಸಬೇಕೆಂದು ಬಯಸುವುದು ಯಾವ ನ್ಯಾಯ? ಅವರೇನೂ ಅವರ ಮಗಳನ್ನು ಪ್ರೀತಿ ಮಾಡಿ ಎಂದು ನಿಮ್ಮನ್ನು ಕೇಳಿಕೊಂಡಿರಲಿಲ್ಲವಲ್ಲ? `ನನ್ನ ತಾಯಿ ಸಾಯುವ ಸ್ಥಿತಿಯಲ್ಲಿರುವಾಗ ಹುಡುಗಿ ಬಂದು ನೋಡಲಿಲ್ಲ, ಮುಂದೆ ಇವಳು ನನ್ನ ಹೆತ್ತವರನ್ನು ಹೇಗೆ ನೋಡಿಕೊಳ್ಳುತ್ತಾಳೆ?’ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಿಮ್ಮ ಪ್ರೀತಿಯಲ್ಲೇ ಬಿರುಕು ಮೂಡಿಸುತ್ತಿದ್ದೀರಿ! ಸ್ವಲ್ಪ ಅವಳ ಪರವಾಗಿ ಯೋಚನೆ ಮಾಡಿ, ನಿಮ್ಮ ತಾಯಿ ಮಗ ತನಗಿಷ್ಟವಿಲ್ಲದವಳನ್ನು ಪ್ರೀತಿಸುತ್ತಿದ್ದಾನೆ ಎನ್ನುವ ಕಾರಣಕ್ಕೇ ವಿಷ ತೆಗೆದುಕೊಂಡಿದ್ದಾರೆ.

    ಎನ್ನುವ ಸುದ್ದಿ ತಿಳಿದ ಹುಡುಗಿ ಮನೆಯವರು ಈ ಮದುವೆ ಆಗಿಯೇ ಹೋಗುತ್ತದೆ ಎಂದು ಹೇಗೆ ನಂಬುತ್ತಾರೆ? ನಿಮ್ಮ ಹುಡುಗಿಗಾದರೂ ತನ್ನ ಕಾರಣವಾಗಿಯೇ ವಿಷ ಕುಡಿದ ಹೆಂಗಸನ್ನು ನೋಡಲು ಬಂದರೆ ಅವರು ಬಯ್ಯಬಹುದು ಎನ್ನುವ ಭಯವಿರುವುದಿಲ್ಲವೇ? ಅವಳು ಮದುವೆಯಾಗುತ್ತಿರುವುದು ನಿಮಗೆ ಹೆಂಡತಿ ಆಗುವುದಕ್ಕೋ? ಅಥವಾ ನಿಮ್ಮ ತಂದೆತಾಯಿಯರನ್ನು ನೋಡಿಕೊಳ್ಳುವ `ಆಯಾ’ ಆಗುವುದಕ್ಕೋ? ಮುಂದೆ ಅವಳನ್ನು ನಿಮ್ಮ ತಂದೆತಾಯಿಯರು ಮಗಳಂತೆ ಪ್ರೀತಿ ಮಾಡಿದರೆ, ಅವಳು ನಿಮ್ಮ ಹೆತ್ತವರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿಯೇ ನೋಡಿಕೊಳ್ಳಬಹುದು.

    ಇಂಥ ವಾಸ್ತವವಾದ ಯೋಚನೆಗಳನ್ನು ಬಿಟ್ಟು ಮುಂದೆ ಅವಳು ಹೇಗಿರುತ್ತಾಳೆ? ಎನ್ನುವ ಪ್ರಶ್ನೆಯನ್ನು ಭೂತಾಕಾರವಾಗಿಸಿ, ನಿಮ್ಮ ಪ್ರೀತಿಯ ಮರದ ಬುಡಕ್ಕೇ ಅನುಮಾನದ ಕೊಡಲಿ ಹಾಕಿಕೊಳ್ಳುತ್ತಿದ್ದೀರಲ್ಲ? ಇತ್ತ ಪೂರ್ತಿಯಾಗಿ ಪಾಶ್ಚಾತ್ಯ ಸಂಸ್ಕತಿಯನ್ನೂ ಪಾಲಿಸದೆ, ಅತ್ತ ಸಂಪೂರ್ಣವಾಗಿ ನಮ್ಮ ಸಂಸ್ಕತಿಯನ್ನೂ ಪಾಲಿಸದೆ, ಅದೂ ಇರಲಿ, ಇದೂ ಇರಲಿ ಎಂದರೆ ಹೇಗೆ ಸಾಧ್ಯ ಸ್ವಾಮಿ? ಬಹಳಷ್ಟು ಯುವಕ ಯುವತಿಯರು ನನ್ನ ಮುಂದೆ ಕುಳಿತು ಇದೇ ಕಥೆಯನ್ನು ಹೇಳುತ್ತಾರೆ. ಇಲ್ಲಿ ಯುವಕನಿಗಿಂತ ಯುವತಿಯ ಮನಃ ಸ್ಥಿತಿ ಇನ್ನೂ ನಾಜೂಕಾಗಿರುತ್ತದೆ. ಅವಳು `ನನ್ನ ಶೀಲ ಹಾಳಾಗಿದೆ’ ಎಂದು ಬೇರೆ ಕೊರಗುತ್ತಾಳೆ. `ಕಾಮಾತುರಾಣಾಂ ನ ಭಯಾ ನ ಲಜ್ಜಾ’ ಎನ್ನುವ ಮಾತುಗಳನ್ನು ನಿಜ ಮಾಡಿಬಿಡುತ್ತೀರಿ. ಈ ಕಾಲದಲ್ಲಿ ನಿಮ್ಮ ತಾಯಿಯಾದರೂ ಯಾಕೆ ಅಷ್ಟು ಹಠ ಮಾಡುತ್ತಿದ್ದಾರೆ? ಇರಲಿ, ನೀವೀಗ ಒಂದು ಸಭ್ಯ ದಾರಿಯನ್ನು ಹಿಡಿದು ಅತ್ತ ಆ ಹುಡುಗಿಗೂ ಮೋಸವಾಗದ ಹಾಗೆ, ಇತ್ತ ನಿಮ್ಮ ತಾಯಿಗೂ ಸಮಾಧಾನವಾಗುವ ಹಾಗೆ ಮುಂದುವರಿಯಬೇಕು. ನಿಮಗಿನ್ನೂ ಕೇವಲ 25 ವರ್ಷ ವಯಸ್ಸು. ಇನ್ನೂ ಒಂದು ವರ್ಷ ಮದುವೆಯನ್ನು ಮುಂದೆ ಹಾಕಿ.

    ನಿಮ್ಮ ಹುಡುಗಿಗೂ ಒಂದು ವರ್ಷ ತಾಳ್ಮೆಯಿಂದ ಕಾಯಲು ಹೇಳಿ. ಈ ಒಂದು ವರ್ಷದಲ್ಲಿ `ನಾನು ಮದುವೆಯಾದರೆ ಆ ಹುಡುಗಿಯನ್ನೇ. ಇಲ್ಲದಿದ್ದರೆ ನನಗೆ ಮದುವೆಯೇ ಬೇಡ’ ಎನ್ನುವ ನಿರ್ಧಾರವನ್ನು ನೀವು ಮೊದಲು ಗಟ್ಟಿ ಮಾಡಿಕೊಂಡು, ನಂತರ ನಿಧಾನವಾಗಿ ನಿಮ್ಮ ತಾಯಿಯೂ ಅದನ್ನು ಅಂಗೀಕರಿಸುವಂತೆ ಮಾಡುವುದು ನಿಮ್ಮದೇ ಜವಾಬ್ದಾರಿ. ಒಂದು ವರ್ಷ ಕಾದು ನೋಡೋಣ! ಕಾವೇರಿಯಲ್ಲಿ ಅದೆಷ್ಟೋ ನೀರು ಹರಿದು ಸಾಗರ ಸೇರಿರುತ್ತದೆ. ಹಾಗೇ ನಿಮ್ಮ ಮನೆಯವರೆಲ್ಲರ ಮನಸ್ಸಿನ ಅದೆಷ್ಟೋ ಕಲ್ಮಶಗಳು ಹರಿದುಹೋಗಿ ಮನಸ್ಸು ತಿಳಿಯಾಗಬಹುದು. ಆಗಲೂ ನಿಮ್ಮ ಹುಡುಗಿ ನಿಮಗಾಗಿಯೇ ಕಾಯುತ್ತಿದ್ದರೆ ಖಂಡಿತ ಅವಳನ್ನೇ ಮದುವೆಯಾಗುವುದು ನಿಮ್ಮದೇ ಕರ್ತವ್ಯವಾಗುತ್ತದೆ.

    ಇಲ್ಲೊಬ್ಬಳು ಸುಂದರಿ ಗಂಡನ ವಿರುದ್ಧ ಹೇಳಿದ್ದನ್ನೇ ಹೇಳ್ತಾ ಇರ್ತಾಳೆ- ಅವಳನ್ನು ನಿಭಾಯಿಸೋದು ಹೇಗೆ?

    ನಿಮ್ಮ ಪ್ರಶ್ನೆ ಓದಿ ನಗ್ಬೇಕೋ, ಅಳ್ಬೆಕೋ ಗೊತ್ತಾಗ್ತಿಲ್ವಲ್ಲಾ ಸ್ವಾಮಿ… ಯಾವ ಕಾಲದಲ್ಲಿದ್ದೀರಿ ನೀವು?

    ನನ್ನದು ಒಂಥರಾ ವಿಚಿತ್ರ ಕೇಸ್​ ಮೇಡಂ… ಎಲ್ಲರೂ ಒಳ್ಳೆಯವರು, ಆದರೆ ನನಗೇ ಸೊಕ್ಕು ಜಾಸ್ತಿ ಅನಿಸತ್ತೆ…

    ವಯಸ್ಸಿದ್ದಾಗ ಮಾಡಬಾರದ್ದೆಲ್ಲಾ ಮಾಡಿದೆ, ಈಗ ಹೆಂಡ್ತಿ ಹತ್ತಿರ ಸೇರಿಸುತ್ತಿಲ್ಲ- ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts