

ಮುಂಬೈ: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಕೆಲ ನಟ-ನಟಿಯರು ಒಂದು ಕಾಲದಲ್ಲಿ ಬಹಳ ಸದ್ದು ಮಾಡಿ ಇದ್ದಕ್ಕಿದ್ದಂತೆ ಸಿನಿಮಾ ಕ್ಷೇತ್ರದಿಂದ ಕಣ್ಮರೆಯಾಗಿಬಿಡುತ್ತಾರೆ. ಆದರೂ ಅವರ ನಟನೆಯ ಸಿನಿಮಾಗಳು ಮತ್ತು ಹಾಡುಗಳು ಸದಾ ಸಿನಿರಸಿಕರನ್ನು ರಂಜಿಸುತ್ತಲೇ ಇರುತ್ತದೆ. ಇಂತಹ ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಕಲಾವಿದ ಮತ್ತು ಯಾರೇ ನೀನು ಚೆಲುವೆ ಸಿನಿಮಾಗಳು ಕೂಡ ಒಂದು.
ರವಿಚಂದ್ರನ್ ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿಯೇ ಇದಾರಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ನಾವಿಲ್ಲಿ ಹೇಳ ಹೊರಟಿರುವುದು ರವಿಮಾಮನ ಕುರಿತಲ್ಲ. ಆ ಚಿತ್ರದ ನಟಿಯ ಬಗ್ಗೆ. ಕಲಾವಿದ ಸಿನಿಮಾವನ್ನು ನೀವು ನೋಡಿರಬಹುದು. ಅದರಲ್ಲಿ ಒಂದು ಬೆಚ್ಚನೆ ಗೂಡಿರಲು, ಹೇ ನವಿಲೆ ನನ್ನ ನವಿಲೆ, ಓ ತುಂಟಿಯೇ, ಇನಿಯಾ ಇನಿಯಾ ಮತ್ತು ಅಂದಗಾರ ಅಳಿಮಯ್ಯ ಹಾಡುಗಳು ಇಂದಿಗೂ ಕೇಳುಗರಿಗೆ ಮುದ ನೀಡುತ್ತದೆ. ಇನ್ನು ಯಾರೇ ನೀನು ಚೆಲುವೆ ಸಿನಿಮಾದಲ್ಲಿ ಡಯಾನಾ ಡಯಾನಾ ಹಾಡನ್ನು ಕೇಳೇ ಇರುತ್ತೀರಿ.
ಈ ಹಾಡುಗಳಲ್ಲಿ ಕನ್ನಡಿಗರ ಮನಸ್ಸನ್ನು ಕದ್ದಿದ್ದು ನಟಿ ಹೀರಾ ರಾಜ್ಗೋಪಾಲ್. ಕನ್ನಡದಲ್ಲಿ ಅಪೂರ್ವ ಜೋಡಿ, ಕಲಾವಿದ ಮತ್ತು ಯಾರೇ ನೀನು ಚೆಲುವೆ ಸೇರಿ ನಟಿಸಿದ್ದು ಮೂರೇ ಸಿನಿಮಾವಾದರೂ ತಮ್ಮ ಬೋಲ್ಡ್ ನಟನೆಯಿಂದಲೇ ಹೀರಾ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಅಲ್ಲದೆ, ತಮ್ಮ ಬ್ಯೂಟಿ ಮತ್ತು ಮಾದಕ ನೋಟದಿಂದಲೇ ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗಿದ್ದರು. ಅವರ ಹಾಡುಗಳಂತೂ ಇಂದಿಗೂ ಫೇಮಸ್. ಕನ್ನಡಕ್ಕಿಂತ ತಮಿಳು, ತೆಲುಗು ಮತ್ತು ಹಿಂದಿ ಭಾಷೆ ಸಿನಿಮಾಗಳಲ್ಲಿ ಹೀರಾ ಹೆಚ್ಚು ಮಿಂಚಿದರು. 1999ರವರೆಗೂ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದ ಹೀರಾ ಆ ಬಳಿಕ ಸಿನಿಮಾ ಲೋಕದಿಂದ ಕಣ್ಮರೆಯಾದರು.
ಹೀರಾ ಅವರು 2002ರಲ್ಲಿ ಪುಷ್ಕರ್ ಮಾಧವ್ ಅವರನ್ನು ವಿವಾಹವಾದರು. ಆದರೆ, ಕೆಲವೇ ವರ್ಷಗಳಲ್ಲಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ, 2006 ರಲ್ಲಿ ಡಿವೋರ್ಸ್ ಪಡೆದುಕೊಂಡರು. ಒಂದು ಕಾಲದಲ್ಲಿ ಯುವಕರ ಕನಸಿನ ರಾಣಿಯಾಗಿದ್ದ ಹೀರಾ, ಇಂದು ಗುರುತೇ ಹಿಡಿಯದಷ್ಟು ಬದಲಾಗಿಬಿಟ್ಟಿದ್ದಾರೆ.
ಸದ್ಯ ಹೀರಾ ಅವರಿಗೆ 52 ವರ್ಷ ವಯಸ್ಸಾಗಿದ್ದು, ಅವರ ಇತ್ತೀಚಿನ ಫೋಟೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಫೋಟೋ ನೋಡಿದವರು ಇವರೇನಾ ಹೀರಾ? ಕಲಾವಿದ ಸಿನಿಮಾದಲ್ಲಿ ಅವರ ಸೌಂದರ್ಯ ನೋಡಿದವರು ಮಾರುಹೋಗಲೇ ಬೇಕು ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)