ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Sunil Puranik
Published on

ಬೆಂಗಳೂರು: ಕಳೆದ ವರ್ಷ ನಡೆಯಬೇಕಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಕರೊನಾದಿಂದ ರದ್ದಾಗಿತ್ತು. ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಿರುವುದರಿಂದ ಈ ವರ್ಷವೂ ಚಿತ್ರೋತ್ಸವವಿರುವುದಿಲ್ಲ ಎಂಬ ಮಾತಿದೆ. ಅದಕ್ಕೆ ಸರಿಯಾಗಿ, ಸರ್ಕಾರ ಇದುವರೆಗೂ ಚಿತ್ರೋತ್ಸವವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಫೆಬ್ರವರಿಯಲ್ಲಿ ಚಿತ್ರೋತ್ಸವ ನಡೆಯುವುದು ಗ್ಯಾರಂಟಿ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್.

ಅಷ್ಟೇ ಅಲ್ಲ, ಮುಂದಿನ ತಿಂಗಳು ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಿದ್ದರೆ, ಆನ್​ಲೈನ್​ಲ್ಲಾದರೂ ಚಿತ್ರೋತ್ಸವ ಆಯೋಜಿಸುವುದಾಗಿ ಹೇಳುತ್ತಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಪರಿಷತ್ ಚುನಾವಣೆ, ಅಧಿವೇಶನ, ಒಮಿಕ್ರಾನ್​ನಿಂದ ಸರ್ಕಾರ ಇದುವರೆಗೂ ಚಿತ್ರೋತ್ಸವವನ್ನು ಅಧಿಕೃತವಾಗಿ ಘೋಷಿಸುವುದಕ್ಕೆ ಸಾಧ್ಯವಾಗಿಲ್ಲ. ಘೋಷಣೆ ತಡವಾದರೂ ಚಿತ್ರೋತ್ಸವ ನಡೆಯುವುದು ಖಂಡಿತಾ. ಕರೊನಾ ಸಮಸ್ಯೆ ಇಲ್ಲದಿದ್ದರೆ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಚಿತ್ರಮಂದಿರ ಗಳಲ್ಲೇ ಚಿತ್ರೋತ್ಸವವನ್ನು ಆಯೋಜಿಸುತ್ತೇವೆ. ಒಂದು ಪಕ್ಷ ಸಾಧ್ಯವಾಗದಿದ್ದರೆ, ಆನ್​ಲೈನ್ ಆಯೋಜಿಸುವ ಯೋಚನೆ ಇದೆ.

ಈಗಾಗಲೇ ಅದಕ್ಕೆ ಸೂಕ್ತ ತಯಾರಿಗಳು ನಡೆಯುತ್ತಿವೆ. ಚಿತ್ರೋತ್ಸವದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಎಂಟ್ರಿಗಳು ಸಹ ಬರುತ್ತಿವೆ. ಹಾಗಾಗಿ, ಚಿತ್ರೋತ್ಸವ ರದ್ದಾಗುವ ಮಾತಿಲ್ಲ. ಹೇಗೂ ಈ ವರ್ಷ ಅಂತಾರಾಷ್ಟ್ರೀಯ ಮಾನ್ಯತೆ ಸಿಗುವ ಸಾಧ್ಯತೆ ಇದೆ. ಮಾರ್ಗಸೂಚಿಗಳನ್ನು ಪಾಲಿಸಿ, ಚಿತ್ರೋತ್ಸವ ಮುಂದುವರೆಸುತ್ತೇವೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net