

ಬೆಂಗಳೂರು: ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಅವರ ಪುತ್ರ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ಬಗ್ಗೆ ಗೊತ್ತಿತ್ತು. ಇದೀಗ ಚಿತ್ರದ ಟೈಟಲ್ ರಿವೀಲ್ ಆಗಿದ್ದು, ಇತ್ತೀಚೆಗಷ್ಟೆ ಚಿತ್ರದ ಮುಹೂರ್ತವೂ ನೆರವೇರಿದೆ. ಚಿತ್ರಕ್ಕೆ ‘ಗೌರಿ’ ಎಂದು ಶೀರ್ಷಿಕೆ ಇಡಲಾಗಿದ್ದು, ಸಮರ್ಜಿತ್‌ಗೆ ಚಿತ್ರದಲ್ಲಿ ಬಿಗ್‌ಬಾಸ್ ಮತ್ತು ‘ಪುಟ್ಟಗೌರಿ’ ಧಾರಾವಾಹಿ ಖ್ಯಾತಿಯ ಸಾನ್ಯಾ ಐಯರ್ ನಾಯಕಿಯಾಗಿದ್ದಾರೆ.
ಇಂದ್ರಜಿತ್, ‘ಅಕ್ಕನ ಒಪ್ಪಿಗೆ ಪಡೆದು ‘ಗೌರಿ’ ಶೀರ್ಷಿಕೆ ಬಳಸಿದ್ದೇವೆ. ಅವರ ನೆನಪಿನಲ್ಲಿಯೇ ಈ ಟೈಟಲ್ ಇಟ್ಟಿದ್ದೇನೆ. ಇದು ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ, ಇಡೀ ದೇಶವನ್ನು ಕಾಡುತ್ತಿರುವ ಸಮಸ್ಯೆಯ ಕುರಿತ ಕಥೆ. ಲೋಕಸಭಾ ಚುನಾವಣೆಗೂ ಮುನ್ನ ಮುಂದಿನ ವರ್ಷ ಮಾರ್ಚ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಇದೆ’ ಎಂದು ಹೇಳಿಕೊಂಡರು. ನಾಯಕ ಸಮರ್ಜಿತ್, ‘ರಂಗಶಂಕರದಲ್ಲಿ ನಾಟಕ, ನ್ಯೂ ಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಸಿನಿಮಾ, ಚೇತನ್ ಡಿಸೋಜಾ ಅಕಾಡೆಮಿಯಲ್ಲಿ ಆ್ಯಕ್ಷನ್ ಮತ್ತು ಸ್ಟಂಟ್ಸ್, ಮುರಳಿ ಮಾಸ್ಟರ್ ಬಳಿ ಡಾನ್ಸ್, ಕುದುರೆ ಸವಾರಿ, ನಿರ್ದೇಶಕ ಯೋಗರಾಜ್ ಭಟ್ ಅವರ ‘ಗರಡಿ’ ಮತ್ತು ‘ಕರಟಕ ದಮನಕ’ ಚಿತ್ರಗಳಲ್ಲಿ ಡೈರೆಕ್ಷನ್ ವಿಭಾಗದಲ್ಲಿ ಕಲಿತು ಇದೀಗ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದೇನೆ’ ಎಂದು ತಮ್ಮ ತಯಾರಿಯ ಕುರಿತು ಹೇಳಿಕೊಂಡರು.
ನಾಯಕಿ ಸಾನ್ಯಾ, ‘ಚಿಕ್ಕ ವಯಸ್ಸಿನಿಂದಲೂ ಕಂಡ ಕನಸು ಇದೀಗ ನನಸಾಗುತ್ತಿದೆ. ಇದು ನನಗೆ ಭಾವುಕ ಕ್ಷಣ’ ಎಂದರು. ದಕ್ಷಿಣ ಅಮೆರಿಕಾದಲ್ಲಿ ನಡೆದ ಮಿಸ್ ಟೀನ್ ಇಂಟರ್‌ನ್ಯಾಷನಲ್ ಪ್ರಿನ್ಸೆಸ್ ಕಿರೀಟ ಮುಡಿಗೇರಿಸಿಕೊಂಡ ಸ್ವೀಜಲ್ ುರ್ಟಾಡೊ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಚಿತ್ರಕ್ಕೆ ಎ.ಜೆ.ಶೆಟ್ಟಿ ಛಾಯಾಗ್ರಹಣ ಇರಲಿದೆ.