ಕಾಶ್ಮೀರದಲ್ಲಿ ಚಂದನವನ; ಚಳಿ ಇರಲಿ ಮಂಜು ಬರಲಿ

Ullasa
Published on

ಬೆಂಗಳೂರು: ಕಾಶ್ಮೀರದಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣ ಮಾಡುವುದು ಹೊಸ ವಿಷಯವೇನಲ್ಲ. ‘ಪ್ರೇಮದ ಕಾಣಿಕೆ’ ಕಾಲದಿಂದ ಅಲ್ಲಿ ಕನ್ನಡದ ಹಲವು ಚಿತ್ರಗಳ ಚಿತ್ರೀಕರಣ ಮಾಡಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಶ್ಮೀರಕ್ಕೆ ಹೋಗಿ ಚಿತ್ರೀಕರಣ ಮಾಡಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಮೂರು ತಿಂಗಳಿಂದ ಇತ್ತೀಚೆಗೆ ಕಾಶ್ಮೀರದಲ್ಲಿ ಮೂರು ಚಿತ್ರಗಳ ಚಿತ್ರೀಕರಣ ನಡೆದಿದ್ದು, ಸದ್ಯದಲ್ಲೇ ‘777 ಚಾರ್ಲಿ’ ತಂಡವು ಶೂಟಿಂಗ್ ಮಾಡುವುದಕ್ಕೆ ಮತ್ತೊಮ್ಮೆ ಕಾಶ್ಮೀರಕ್ಕೆ ತೆರಳಲಿದೆ.

ಲಾಕ್​ಡೌನ್ ನಂತರ ಕಾಶ್ಮೀರದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ‘ಏಕ್ ಲವ್ ಯಾ’ ಎಂದು ಪ್ರೇಮ್ ಇತ್ತೀಚೆಗೆ ಖುಷಿಯಿಂದ ಹೇಳಿಕೊಂಡಿದ್ದರು. ‘ಏಕ್ ಲವ್ ಯಾ’ ಚಿತ್ರದ ಒಂದು ಪ್ರಮುಖ ಹಾಡನ್ನು, ಕಾಶ್ಮೀರದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಿರುವ ಪ್ರೇಮ್ ಕಳೆದ ತಿಂಗಳೇ ವಾಪಸಾಗಿದ್ದಾರೆ.

ಪ್ರೇಮ್ ಅಲ್ಲಿ ಚಿತ್ರೀಕರಣ ಮಾಡುವ ಸಮಯದಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ ‘ಚಾರ್ಲಿ 777’ ಚಿತ್ರದ ಚಿತ್ರೀಕರಣವೂ ನಡೆಯಿತು. ಕಾಶ್ಮೀರದಲ್ಲಿ ಚಿತ್ರದ ಒಂದಿಷ್ಟು ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಿದ ಚಿತ್ರತಂಡ ಡಿಸೆಂಬರ್​ನಲ್ಲೇ ತವರಿಗೆ ವಾಪಸಾಗಿತ್ತು. ಈಗ ಮತ್ತೆ 15ರಿಂದ 20ರೊಳಗೆ ಕಾಶ್ಮೀರಕ್ಕೆ ಹೋಗಿ, ಕೊನೆಯ ಹಂತದ ಚಿತ್ರೀಕರಣ ಮುಗಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ‘ಕೆಲವು ದೃಶ್ಯಗಳಿಗೆ ಹಿಮದ ಅವಶ್ಯಕತೆ ಇತ್ತು. ಚಿತ್ರತಂಡ ಡಿಸೆಂಬರ್​ನಲ್ಲಿ ಕಾಶ್ಮೀರಕ್ಕೆ ಹೋದ ಸಂದರ್ಭದಲ್ಲಿ ಇನ್ನೂ ಹಿಮ ಸುರಿಯುತ್ತಿರಲಿಲ್ಲ. ಈಗ ಹಿಮ ಶುರುವಾಗಿದೆ. ಹಾಗಾಗಿ ಚಿತ್ರತಂಡದ ಕೆಲವು ಸದಸ್ಯರು ಮಾತ್ರ ಮತ್ತೊಮ್ಮೆ ಕಾಶ್ಮೀರಕ್ಕೆ ಹೋಗಿ ಐದು ದಿನಗಳ ಕಾಲ ಚಿತ್ರೀಕರಣ ಮುಗಿಸಿಕೊಂಡು ಬರಲಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ.

ಇನ್ನು, ರೋಹಿತ್ ಪದಕಿ ನಿರ್ದೇಶನದ ‘ರತ್ನನ್ ಪ್ರಪಂಚ’ ಚಿತ್ರತಂಡ ಸಹ ಸುರಿಯುತ್ತಿರುವ ಹಿಮದ ನಡುವೆಯೇ ಚಿತ್ರೀಕರಣದಲ್ಲಿ ನಿರತವಾಗಿದೆ. ‘ಡಾಲಿ’ ಧನಂಜಯ ಮತ್ತು ನಾಯಕಿ ರೆಬಾ ಮೋನಿಕಾ, ಮಂಜಿನ ಮಳೆಯಲ್ಲಿಯೇ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕುರಿತು ಕಾಶ್ಮೀರದಿಂದಲೇ ಮಾತನಾಡಿದ ಧನಂಜಯ್, ‘ಇಡೀ ಚಿತ್ರವೇ ಒಂದು ಹುಡುಕಾಟದ ಹಿನ್ನೆಲೆಯಲ್ಲಿ ಸಾಗುವುದರಿಂದ, ಆ ಪಯಣ ಕಾಶ್ಮೀರಕ್ಕೂ ವ್ಯಾಪಿಸಿರುತ್ತದೆ. ಒಟ್ಟು 10 ದಿನ ಇಲ್ಲಿ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದೇವೆ. ಈಗಾಗಲೇ ಐದು ದಿನ ಮುಗಿದಿದೆ. ಇದೇ ಮಂಜಿನ ವಾತಾವರಣವೇ ನಿರ್ದೇಶಕರಿಗೆ ಬೇಕಾಗಿತ್ತು. ಚಳಿಯಲ್ಲಿಯೇ ನಾನು ಮತ್ತು ರೆಬಾ ನಟಿಸುತ್ತಿದ್ದೇವೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net