ಯಾವ ಹೀರೋ ಡ್ರಗ್ಸ್​ ತಗೋತಾರೆ ಅಂತ ನನಗೆ ಗೊತ್ತು: ಪಾಯಲ್ ಘೋಶ್​

Payal Gosh - Final
Published on

ರಾಕುಲ್​ ಪ್ರೀತ್​ ಸಿಂಗ್​, ಸಾರಾ ಅಲಿ ಖಾನ್​ ಸೇರಿದಂತೆ ಕೆಲವರು ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂದು ಇತ್ತೀಚೆಗಷ್ಟೇ ರಿಯಾ ಚಕ್ರವರ್ತಿ ಬಾಂಬ್​ ಸಿಡಿಸಿದ ಹಿನ್ನೆಲೆಯಲ್ಲಿ, ಬಾಲಿವುಡ್​ನಲ್ಲಿ ಯಾರೆಲ್ಲಾ ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಚರ್ಚೆ ಹೆಚ್ಚಾದಂತೆ, ಒಂದಿಷ್ಟು ಕಲಾವಿದರಿಗೆ ನಡುಕ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಹೀಗಿರುವಾಗಲೇ, ಯಾರೆಲ್ಲಾ ಹೀರೋಗಳು ಡ್ರಗ್ಸ್​​ ತೆಗೆದುಕೊಳ್ಳುತ್ತಾರೆ ಎಂಬ ವಿಷಯ ತಮಗೆ ಗೊತ್ತಿದೆ ಎಂದು ನಟಿ ಪಾಯಲ್​ ಘೋಶ್​ ಹೇಳಿಕೊಂಡಿದ್ದಾರೆ. ಈ ಪಾಯಲ್​ ಟಾಲಿವುಡ್​ ಮತ್ತು ಬಾಲಿವುಡ್​ನ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದಾರಾದರೂ, ದೊಡ್ಡ ಹೆಸರೇನೂ ಮಾಡಿಲ್ಲ. ಇಷ್ಟು ದಿನ ಚಿತ್ರರಂಗದಿಂದ ದೂರವೇ ಉಳಿದಿದ್ದ ಅವರು, ಇದೀಗ ಬಾಂಬ್​ ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಎಲ್ಲಾ ಹೀರೋಗಳು ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾರೆ. ಕೆಲವರು ತಮ್ಮ ಆರೋಗ್ಯವನ್ನು ಬಹಳ ಚೆನ್ನಾಗಿ ಕಾಪಾಡಿಕೊಳ್ಳುತ್ತಾರೆ. ಆದರೆ, ಕೆಲವರಿಗೆ ಮಾತ್ರ ಡ್ರಗ್ಸ್​ ಚಟವಿದೆ. ಆ ವಿಷಯ ನನಗೆ ಚೆನ್ನಾಗಿ ಗೊತ್ತಿದೆ' ಎಂದು ಹೇಳಿದ್ದಾರೆ ಪಾಯಲ್​.

'ಒಂದಿಷ್ಟು ಸಮಯ ಅಥವಾ ಆರೋಗ್ಯಕ್ಕೆ ಸಮಸ್ಯೆಯಾದಾಗ ಬಿಟ್ಟುಬಿಡುವ ಯೋಚನೆಯನ್ನು ಹಲವರು ಮಾಡುತ್ತಾರೆ. ಆದರೆ, ಒಬ್ಬ ಪಬ್ಲಿಕ್​ ಫಿಗರ್​ ಆದ ನಂತರ ಸಮಾಜಕ್ಕೆ ರೋಲ್​ ಮಾಡಲ್​ ಆಗಬೇಕು, ನಾಲ್ಕು ಜನರಿಗೆ ಸ್ಫೂರ್ತಿಯಾಗಬೇಕು. ಅದು ಬಿಟ್ಟು ಈ ತರಹ ಮಾಡುವುದು ತಪ್ಪು' ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಸುಶಾಂತ್​ ಸಿಂಗ್​ ರಜಪೂತ್​ ಬಗ್ಗೆ ಮಾತನಾಡಿರುವ ಅವರು, ತಾವಿಬ್ಬರು ಬಹಳ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. 'ನಾನು ಸುಶಾಂತ್ ಒಳ್ಳೆಯ ಸ್ನೇಹಿತರಾಗಿದ್ದೆವು. ಇಬ್ಬರೂ ಜತೆಗೆ ವರ್ಕೌಟ್​ ಮಾಡುತ್ತಿದ್ದೆವು. ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬ ವಿಷಯ ಕೇಳಿ ಶಾಕ್​ ಆಯಿತು. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ಅವರಿಗಿರಲಿಲ್ಲ. ಹಾಗಾಗಿ ನನಗೆ ಅವರ ಸಾವಿನ ಬಗ್ಗೆ ಸಂಶಯವಿದೆ' ಎಂದು ಹೇಳಿದ್ದಾರೆ ಪಾಯಲ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net