ಮುಂಬೈ ಬಿಟ್ಟು ತವರೂರಿಗೆ ವಾಪಸ್ಸಾದ ಕಂಗನಾ!

Kangana Ranaut - Final
Published on

ಮುಂಬೈ ನಗರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗುತ್ತಿದೆ ಎಂಬ ಹೇಳಿಕೆ ನೀಡಿ, ಶಿವಸೇನಾದ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​, ಇದೀಗ ಮುಂಬೈ ಬಿಟ್ಟು ತಮ್ಮ ತವರೂರಾದ ಹಿಮಾಚಲ ಪ್ರದೇಶದ ಮನಾಲಿಗೆ ಇಂದು ಬೆಳಿಗ್ಗೆ ಪ್ರಯಾಣ ಬೆಳೆಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಬಹಳ ಭಾರವಾದ ಹೃದಯದಿಂದ ನಾನು ಮುಂಬೈ ಬಿಟ್ಟು ಮನಾಲಿಗೆ ವಾಪಸ್ಸಾಗುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಮೇಲೆ ಒಂದಲ್ಲ ಒಂದು ಕಾರಣಕ್ಕೆ ನಿರಂತರವಾಗಿ ಅಟ್ಯಾಕ್​ ಮಾಡಿ, ನಾನು ಭಯಭೀತಳಾಗುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲ, ಮುಂಬೈ ನಗರವನ್ನು ಪಿಓಕೆಗೆ ಹೋಲಿಸಿದ್ದು ಸರಿಯಾಗಿಯೇ ಇತ್ತು' ಎಂದು ಅವರು ಹೇಳಿಕೊಂಡಿದ್ದಾರೆ.

ಚಂಡೀಗಢದಲ್ಲಿ ಲ್ಯಾಂಡ್​ ಆದ ನಂತರ ಟ್ವೀಟ್​ ಮಾಡಿರುವ ಅವರು, 'ಈ ಬಾರಿ ನಾನು ಬಚಾವಾದೆ. ಒಂದು ಕಾಲದಲ್ಲಿ ಮುಂಬೈ ನನಗೆ ಅಮ್ಮನ ಮಡಿಲಿನಂತೆ ಇತ್ತು. ಅಷ್ಟು ಸುರಕ್ಷಿತವಾಗಿತ್ತು. ಆದರೆ, ಇದೀಗ ಬಹಳ ಬದಲಾಗಿದೆ. ನಾನು ಬದುಕಿ ಬಂದಿದ್ದೇ ಪುಣ್ಯ ಎನ್ನುವಂತಾಗಿದೆ. ಯಾವಾಗ ಶಿವಸೇನಾ, ಸೋನಿಯಾ ಸೇನಾ ಆಯ್ತೋ, ಅಲ್ಲಿಂದ ಮುಂಬೈ ಸಾಕಷ್ಟು ಬದಲಾಗಿದೆ' ಎಂದು ಅವರು ಹೇಳಿದ್ದಾರೆ.

ಕಂಗನಾ ಕಳೆದ ಬುಧವಾರವಷ್ಟೇ ಮನಾಲಿಯಿಂದ ಮುಂಬೈಗೆ ಬಂದಿದ್ದರು. ಅವರ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಬೃಹನ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರಣ ನೀಡಿ, ಭಾಗಶಃ ಕೆಡವಿದ್ದರು. ಈ ಸಂದರ್ಭದಲ್ಲಿ ಮುಂಬೈಗೆ ವೈ ಪ್ಲಸ್​ ಭದ್ರತೆಯೊಂದಿಗೆ ಬಂದ ಕಂಗನಾ, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ಆಡಳಿತ ಶಿವಸೇನಾ ಮತ್ತು ಕಾಂಗ್ರರೆಸ್​ ಪಕ್ಷವನ್ನು ಇದಕ್ಕೆ ದೂರಿದ್ದರು.

ಈ ವಿಷಯವಾಗಿ ಭಾನುವಾರ ಮಹಾರಾಷ್ಟ್ರದ ರಾಜ್ಯಪಾಲರನ್ನೂ ಭೇಟಿ ಮಾಡಿ, ತಮಗಾದ ಅನ್ಯಾಯದ ವಿರುದ್ಧ ಅವರ ಗಮನಸೆಳೆದಿದ್ದ ಕಂಗನಾ, ಇದೀಗ ಮನಾಲಿಗೆ ವಾಪಸ್ಸಾಗಿದ್ದು, ಸದ್ಯದಲ್ಲೇ ಮುಂಬೈಗೆ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net