

ಹೈದರಾಬಾದ್: ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ತಮ್ಮ ಸೌಂದರ್ಯ ಮತ್ತು ನಟನೆಯಿಂದಲೇ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಪುಷ್ಪ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಸದ್ಯ ಪುಷ್ಪ 2 ಚಿತ್ರದ ಶೂಟಿಂಗ್ನಲ್ಲಿ ಬಿಜಿಯಾಗಿದ್ದು, ಈ ಸಿನಿಮಾ ಡಿಸೆಂಬರ್ 6 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದರ ನಡುವೆ ರಶ್ಮಿಕಾ ಇತ್ತೀಚೆಗಷ್ಟೇ ಇಂಟರೆಸ್ಟಿಂಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದನ್ನು ಓದಿದ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಪೋಸ್ಟ್ನಲ್ಲಿ ಏನಿದೆ ಎಂಬುದನ್ನು ನಾವೀಗ ತಿಳಿಯೋಣ.
ನಾನು ತುಂಬಾ ದಿನಗಳಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದೇನೆ. ಇದಕ್ಕೆ ಬಲವಾದ ಕಾರಣ ಕೂಡ ಇದೆ ಎನ್ನುವ ಮೂಲಕ ಇತ್ತೀಚೆಗಷ್ಟೇ ತನಗೆ ಅಪಘಾತವಾಯಿತು ಎಂದು ಇನ್‌ಸ್ಟಾಗ್ರಾಂನಲ್ಲಿ ರಶ್ಮಿಕಾ ಬಹಿರಂಗಪಡಿಸಿದ್ದಾರೆ.
ಒಂದು ತಿಂಗಳು ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರಲಿಲ್ಲ. ಸಣ್ಣ ಅಪಘಾತವೇ ಇದಕ್ಕೆ ಕಾರಣ. ವೈದ್ಯರ ಸಲಹೆಯಂತೆ ನಾನು ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುತ್ತಿದ್ದೇನೆ. ಸದ್ಯದಲ್ಲೇ ಮತ್ತೆ ಬಿಜಿಯಾಗುತ್ತೇನೆ. ಬದುಕು ಬಹಳ ಅಮೂಲ್ಯವಾಗಿದ್ದು, ತುಂಬಾ ಹುಷಾರಾಗಿರಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ಜೀವನದಲ್ಲಿ ಏನಾಗುತ್ತದೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಜೀವನ ತುಂಬಾ ಅನಿರೀಕ್ಷಿತವಾಗಿದೆ. ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ, ನೆಮ್ಮದಿಯಿಂದ ಬದುಕಬೇಕು ಎಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ರಶ್ಮಿಕಾ ಬರೆದುಕೊಂಡಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಅಪ್ಡೇಟ್ ಕೊಡುವುದಾಗಿ ತಿಳಿಸಿದ್ದಾರೆ.
ರಶ್ಮಿಕಾಗೆ ಅಪಘಾತವಾಗಿರುವ ಸುದ್ದಿ ಕೇಳುತ್ತಿದ್ದಂತೆಯೇ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇನ್ನು ರಶ್ಮಿಕಾ ಸಿನಿಮಾಗಳ ವಿಚಾರಕ್ಕೆ ಬಂದರೆ, ಪುಷ್ಪ 2 ದಿ ರೂಲ್, ಚಾವ ಮತ್ತು ಸಿಕಂದರ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಇದಲ್ಲದೆ, ಅವರು ಆಯುಷ್ಮಾನ್ ಖುರಾನಾ ಅವರೊಂದಿಗೆ 'ವ್ಯಾಂಪೈರ್ಸ್ ಆಫ್ ವಿಜಯನಗರ' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳು ಹೊರತಾಗಿ ‘ದಿ ಗರ್ಲ್‌ಫ್ರೆಂಡ್’, ‘ರೇನ್‌ಬೋ’ ಹಾಗೂ ‘ಕುಬೇರ’ ಚಿತ್ರಗಳಿಗೂ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್)