

Regina Cassandra : ನಟ ಚೇತನ್ ಅಭಿನಯದ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ಕಾಲಿವುಡ್ ಬೆಡಗಿ ರೆಜಿನಾ ಕ್ಯಾಸ್ಸಂದ್ರ ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಬೋಲ್ಡ್ ಆಗಿ ಮಾತನಾಡುವ ಮೂಲಕ ಆಗಾಗ ವಿವಾದಕ್ಕೂ ಗುರಿಯಾಗುತ್ತಿರುತ್ತಾರೆ.
ರೆಜಿನಾ ಅವರು ತೆಲುಗು, ತಮಿಳು ಮಾತ್ರವಲ್ಲದೆ, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲೂ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಸರು ಪಡೆದುಕೊಂಡಿದ್ದಾರೆ. ನಾಯಕಿಯಾಗಿ ಮಾತ್ರವಲ್ಲದೆ, ಅನೇಕ ಸಿನಿಮಾಗಳಲ್ಲಿ ಐಟಂ ಸಾಂಗ್ಗಳಲ್ಲಿ ಸೊಂಟ ಬಳಕಿಸುವ ಮೂಲಕ ತಾನೊಬ್ಬ ಒಳ್ಳೆಯ ಡಾನ್ಸರ್ ಎಂಬುದನ್ನು ಸಹ ಸಾಬೀತುಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೆಲವು ವೆಬ್ ಸೀರಿಸ್‌ಗಳಲ್ಲೂ ನಟಿಸಿದ್ದಾರೆ.
ಕಾಲಿವುಡ್ ನಟ ಅಜಿತ್ ನಾಯಕನಾಗಿ ನಟಿಸಿರುವ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ ವಿಡಮುಯಾರ್ಚಿ ಚಿತ್ರದಲ್ಲಿ ರೆಜಿನಾ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ತನ್ನ ಧರ್ಮದ ವಿಚಾರದ ಬಗ್ಗೆ ರೆಜಿನಾ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಅಂದಹಾಗೆ ರೆಜಿನಾ ಅವರು ಮುಸ್ಲಿಂ ಆಗಿ ಹುಟ್ಟಿದ ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರೆಜಿನಾ, ನನ್ನ ತಾಯಿ ಕ್ರಿಶ್ಚಿಯನ್ ಮತ್ತು ತನ್ನ ತಂದೆ ಮುಸ್ಲಿಂ. ಇಬ್ಬರು ಪ್ರೀತಿಸಿ ಮದುವೆಯಾದ ಕಾರಣ ನಾನು ಹುಟ್ಟುವಾಗಲೇ ಮುಸ್ಲಿಂ ಆಗಿ ಬೆಳೆದೆ ಎಂದು ಹೇಳಿದ್ದಾರೆ.
ನಾನು ಆರು ವರ್ಷದವಳಿದ್ದಾಗ ನನ್ನ ಪಾಲಕರು ಬೇರೆಯಾದರು. ಇದಾದ ಬಳಿಕ ನಾನು ಮತ್ತು ನನ್ನ ತಾಯಿ ಮತ್ತೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡೆವು. ಹೀಗಾಗಿ ರೆಜಿನಾ ಹೆಸರಿಗೆ 'ಕ್ಯಾಸಂದ್ರ' ಸೇರಿಕೊಂಡಿತು. ನಾನು ದೀಕ್ಷಾಸ್ನಾನ ಪಡೆದು ಬೈಬಲ್ ಓದಿದ್ದೇನೆ ಎಂದು ರೆಜಿನಾ ಹೇಳಿದರು.
ನನ್ನನ್ನು ಎಲ್ಲರಿಗೂ ರೆಜಿನಾ ಕ್ಯಾಸಂದ್ರ ಎಂದು ಪರಿಚಯಿಸಲಾಯಿತು. ವಾಸ್ತವವಾಗಿ, ನನ್ನ ನಿಜವಾದ ಹೆಸರು ರೆಜಿನಾ ಮಾತ್ರ. ನನಗೆ ಯಾವುದೇ ಧರ್ಮದ ಬಗ್ಗೆ ಕಾಳಜಿ ಇಲ್ಲ. ಚರ್ಚ್, ಮಸೀದಿ ಹಾಗೂ ದೇವಸ್ಥಾನ ಯಾವುದೇ ಆಗಲಿ ನಾನು ಹೋಗಿ ಪ್ರಾರ್ಥನೆ ಸಲ್ಲಿಸಿ ಬರುತ್ತೇನೆಂದು ರೆಜಿನಾ ಇದೇ ಸಂದರ್ಭದಲ್ಲಿ ತಿಳಿಸಿದರು. (ಏಜೆನ್ಸೀಸ್)