

Watchman : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ದುಬೈನಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್ ಮೂಲದ ವಾಚ್ಮನ್ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದಾರೆ. ಆ ಅದೃಷ್ಟವಂತನ ಹೆಸರು ನಾಂಪಲ್ಲಿ ರಾಚಮಲ್ಲಯ್ಯ. ಇವರಿಗೆ 60 ವರ್ಷ ವಯಸ್ಸು. ಕಳೆದ ಮೂರು ದಶಕಗಳಿಂದ ದುಬೈನ ಅಬುಧಾಬಿಯಲ್ಲಿ ಕಟ್ಟಡದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಬಿಗ್ ಟಿಕೆಟ್ ಹೆಸರಿನ ಲಾಟರಿ ಟಿಕೆಟ್ಗಳನ್ನು ಖರೀದಿಸುವ ಅಭ್ಯಾಸ ಅವರಿಗಿದೆ. ಎಂದಿನಂತೆ ಗೆಳೆಯರ ಜೊತೆ ಸೇರಿ ಬಿಗ್ ಟಿಕೆಟ್ ಖರೀದಿಸಿದ್ದರು.
ಈ ಬಾರಿ ಅನಿರೀಕ್ಷಿತವಾಗಿ ಖರೀದಿಸಿದ ಲಾಟರಿ ಟಿಕೆಟ್ಗೆ ಬಹುಮಾನ ಒಲಿದುಬಂದಿದ್ದು, ರಾಚಮಲ್ಲಯ್ಯನವರ ಆನಂದಕ್ಕೆ ಮಿತಿಯೇ ಇರದಂತಾಗಿದೆ. ಇತ್ತೀಚೆಗೆ ಘೋಷಿಸಲಾದ ಬಿಗ್ ಟಿಕೆಟ್ ಮಿಲಿಯನೇರ್ ಎಲೆಕ್ಟ್ರಾನಿಕ್ ಲಕ್ಕಿ ಡ್ರಾದಲ್ಲಿ ರಾಚಮಲ್ಲಯ್ಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಲಕ್ಕಿ ಡ್ರಾದಲ್ಲಿ ರಾಚಮಲ್ಲಯ್ಯ ಅಂದಾಜು ಎರಡು ಕೋಟಿ ರೂ. ಬಹುಮಾನ ಗೆದ್ದಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಈ ರೀತಿ ಲಾಟರಿ ಟಿಕೆಟ್ ಖರೀದಿಸುತ್ತಿದ್ದೇನೆ. ಕೊನೆಗೂ ಅದೃಷ್ಟ ಒಲಿದು ಬಂದಿದೆ ಎಂದು ರಾಚಮಲ್ಲಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಹುಮಾನದ ಮೊತ್ತವನ್ನು ಟಿಕೆಟ್ ಖರೀದಿಗೆ ಸಹಕರಿಸಿದ ಗೆಳೆಯರೊಂದಿಗೆ ಹಂಚಿಕೊಂಡು, ಉಳಿದ ಹಣವನ್ನು ಕುಟುಂಬಕ್ಕೆ ಬಳಸುವುದಾಗಿ ರಾಚಮಲ್ಲಯ್ಯ ತಿಳಿಸಿದರು. (ಏಜೆನ್ಸೀಸ್)