

ಬೆಂಗಳೂರು: ಧನಂಜಯ್ ಅಭಿನಯದ 'ಹೊಯ್ಸಳ'ದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಚಿತ್ರ ಯಾವಾಗ ಬಿಡುಗಡೆಯಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಶ್ರೀ ರಾಮ ನವಮಿಯ ಪ್ರಯುಕ್ತ ಮಾರ್ಚ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
2021ರಲ್ಲಿ ನೇರವಾಗಿ ಅಮೇಜಾನ್ ಪೆಮ್ನಲ್ಲಿ 'ರತ್ನನ್ ಪ್ರಪಂಚ' ಚಿತ್ರವನ್ನು ಬಿಡುಗೆಡ ಮಾಡಿದ ಮೇಲೆ, ಕೆಆರ್ಜಿ ಸ್ಟುಡಿಯೋಸ್ ಮುಂದೇನು ಮಾಡಬಹುದು? ಯಾವ ತರಹದ ಚಿತ್ರವನ್ನು ನಿರ್ಮಿಸಬಹುದು ಎಂಬ ಪ್ರಶ್ನೆ ಎಲ್ಲರಿಗೂ ಇತ್ತು. ಅದಕ್ಕೆ ಉತ್ತರವಾಗಿ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಮತ್ತು ಯೋಗಿ ಜಿ. ರಾಜ್, ಧನಂಜಯ್ ಜತೆಗೆ 'ಹೊಯ್ಸಳ' ಚಿತ್ರವನ್ನು ಘೋಷಿಸಿದರು. ಇದು ಧನಂಜಯ್ ಅಭಿನಯದ 25ನೇ ಚಿತ್ರವಾಗಿದ್ದು, 'ಸಲಗ' ನಂತರ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಗಡಿಭಾಗದಲ್ಲಿ ನಡೆಯುವ ಕಥೆ ಇದಾಗಿದ್ದು, ಬಹುತೇಕ ಚಿತ್ರೀಕರಣ ಬೆಳಗಾವಿಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಈ ಹಿಂದೆ ಗಣೇಶ್ ಅಭಿನಯದ "ಗೀತಾ' ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ನಾಗೇಂದ್ರ, ಕಥೆ ಮತ್ತು ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದರೆ, ಮಾಸ್ತಿ ಮಂಜು ಸಂಭಾಷಣೆ ರಚಿಸಿದ್ದಾರೆ.
ಇದನ್ನೂ ಓದಿ: ಶೂಟಿಂಗ್ಗೆ ಹೊರಟರು ಬಡೆ ಮಿಯಾ, ಚೋಟೆ ಮಿಯಾ …
'ಹೊಯ್ಸಳ' ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿದ್ದು, ಇದಕ್ಕೂ ಮೊದಲು ಧನಂಜಯ್ ಮತ್ತು ಅಮೃತಾ, 'ಪಾಪ್ಕಾರ್ನ್ ಮಂಕಿ ಟೈಗರ್' ಮತ್ತು 'ಬಡವ ರಾಸ್ಕಲ್'ನಲ್ಲಿ ನಟಿಸಿದ್ದರು. ಈಗ ಮೂರನೆಯ ಬಾರಿಗೆ 'ಹೊಯ್ಸಳ'ದಲ್ಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿದ್ದಾರೆ. ಮಿಕ್ಕಂತೆ 'ಗುಳ್ಟು' ನವೀನ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.