ಮೇ 20ಕ್ಕೆ ಹನಿಮೂನ್; ವೂಟ್​ನಲ್ಲಿ ಶಿವಣ್ಣ ನಿರ್ಮಾಣದ ವೆಬ್​ಸೀರೀಸ್

Honeymoon
Published on

ಬೆಂಗಳೂರು: ಕನ್ನಡದಲ್ಲಿ ಎಲ್ಲರಿಗಿಂತ ಮೊದಲು ವೆಬ್​ಸೀರೀಸ್ ಬಗ್ಗೆ ಯೋಚಿಸಿದವರು ಶಿವರಾಜಕುಮಾರ್. ಎರಡ್ಮೂರು ವರ್ಷಗಳ ಹಿಂದೆಯೇ ಅವರು ‘ಹನಿಮೂನ್’ ಎಂಬ ವೆಬ್​ಸರಣಿ ನಿರ್ವಿುಸುತ್ತಿರುವ ಸುದ್ದಿಯಾಗಿತ್ತು. ಮಗಳು ನಿವೇದಿತಾ ಹೆಸರಲ್ಲಿ ಅವರು ಹಣ ಹೂಡುತ್ತಿರುವ ವಿಷಯ ಕೇಳಿಬಂದಿತ್ತು. ಆ ನಂತರ ಏನಾಯಿತು ಎಂಬ ಅಪ್​ಡೇಟ್ ಇರಲಿಲ್ಲ. ಈಗ ಆ ವೆಬ್​ಸರಣಿಯು ಇದೇ 20ರಿಂದ ವೂಟ್ ಸೆಲೆಕ್ಟ್ ಒಟಿಟಿಯಲ್ಲಿ ಪ್ರಸಾರವಾಗಲಿದೆ.

ಆರು ಕಂತುಗಳ ಈ ಹಾಸ್ಯಪ್ರಧಾನ ವೆಬ್​ಸರಣಿಯಲ್ಲಿ ನಾಗಭೂಷಣ್ ಮತ್ತು ಸಂಜನಾ ಆನಂದ್ ನಟಿಸಿದ್ದಾರೆ. ಹೊಸದಾಗಿ ಮದುವೆಯದ ಹುಡುಗನಿಗೆ ದಾರಿ ತೋರಿಸುವ ಸೂತ್ರಧಾರನಾಗಿ ‘ಲೂಸಿಯಾ’ ಪವನ್ ಕುಮಾರ್ ಇದ್ದಾರೆ. ಜತೆಗೆ ಅಪೂರ್ವ ಭಾರದ್ವಾಜ್, ಆನಂದ್ ನೀನಾಸಂ, ಅರ್ಚನಾ ಕೊಟ್ಟಿಗೆ ಮುಂತಾದವರು ಈ ‘ಹನಿಮೂನ್’ನಲ್ಲಿದ್ದಾರೆ. ಈ ವೆಬ್​ಸರಣಿಯು ಅರೇಂಜ್ಡ್ ಮ್ಯಾರೇಜುಗಳ ಕಥೆ ಹೇಳುತ್ತದಂತೆ. ಒಂದಷ್ಟು ಕುತೂಹಲ, ಫಜೀತಿ, ಗುಟ್ಟುಗಳು, ಒದ್ದಾಟಗಳು ಹೇಗೆ ಹೊಸ ಜೋಡಿಯೊಂದನ್ನು ಹತ್ತಿರಕ್ಕೆ ತಂದು, ಮುಂದಿನ ಬದುಕಿಗೆ ದಾರಿ ತೋರಿಸುತ್ತದೆ ಎನ್ನುವುದು ಈ ಸರಣಿಯ ಕಥೆ.

ಈ ಕುರಿತು ಮಾತನಾಡುವ ಶಿವರಾಜಕುಮಾರ್, ‘ನಮ್ಮ ಸುತ್ತ ಸಾಕಷ್ಟು ಹೊಸ ರೀತಿಯ ಕಥೆಗಳಿವೆ. ಅಂತ ಕಥೆಗಳನ್ನು ವೂಟ್ ಬೆಂಬಲಿಸುತ್ತಿರುವ ಬಗ್ಗೆ ಖುಷಿ ಇದೆ. ಈ ವೆಬ್​ಸರಣಿಯಲ್ಲಿ ನನ್ನ ಮಗಳೂ ಕೆಲಸ ಮಾಡಿರುವುದರಿಂದ, ‘ಹನಿಮೂನ್’ ನನ್ನ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದೆ’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಮತ್ತು ಸರಣಿಯ ತಂಡದವರು ಹಾಜರಿದ್ದರು.

ನಾಯಕನ ಮಾತು...: ಈ ಸಂದರ್ಭದಲ್ಲಿ ಮಾತನಾಡಿದ ಈ ಸರಣಿಯ ನಾಯಕ ನಾಗಭೂಷಣ್, ‘ಇದು ಎಲ್ಲ ಅರೇಂಜ್ಡ್ ಮ್ಯಾರೇಜುಗಳ ಕಥೆ. ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಇದರಲ್ಲಿ ತಮ್ಮನ್ನು ತಾವು ಕಾಣುತ್ತಾರೆ. ಈ ವೆಬ್ ಸರಣಿಯು ಬಹಳ ಚೆನ್ನಾಗಿ ಮೂಡಿಬಂದಿದೆ. ಮೇ 20ಕ್ಕೆ ಸ್ಟ್ರೀಮ್ ಆಗಲಿದ್ದು, ಈ ತರಹದ ಪ್ರಯೋಗಗಳನ್ನು ಜನ ನೋಡಿ ಹಾರೈಸಬೇಕು’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net