

ಬೆಂಗಳೂರು: 'ನಮ್ ನಾಣಿ ಮದ್ವೆ ಪ್ರಸಂಗ' ಎಂಬ ಚಿತ್ರ ರೆಡಿ ಮಾಡಿಟ್ಟುಕೊಂಡು ಬಿಡುಗಡೆಗೆ ಕಾದಿರುವ ಹೇಮಂತ್ ಹೆಗ್ಡೆ, ಅದರ ಬಿಡುಗಡೆಗೂ ಮುನ್ನವೇ ಇನ್ನೊಂದು ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಅದೇ 'ನೆಟ್ವರ್ಕ್'.
ಈ ಚಿತ್ರದ ಕುರಿತು ಮಾತನಾಡುವ ಅವರು, 'ಇದು ಒಂದು ಕುಟುಂಬದ ಕಥೆಯಲ್ಲ. ಸಾಕಷ್ಟು ಜನರು ಎದುರಿಸುತ್ತಿರುವ ಸಮಸ್ಯೆ. ಮೊಬೈಲ್ನಿಂದ ಸಾಕಷ್ಟು ದುಷ್ಪರಿಣಾಮಗಳಾಗುತ್ತಿವೆ. ಮಕ್ಕಳು ಆಟವಾಡುವುದನ್ನೇ ಮರೆಯುತ್ತಿದ್ದಾರೆ. ಮನೆಯಲ್ಲಿ ಮೂರು ಜನ ಇದ್ದರೆ, ಮೂರು ಜನ ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಈ ಎಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ' ಎನ್ನುತ್ತಾರೆ ಅವರು.
30 ವರ್ಷಗಳ ಹಿಂದೆ ಹೇಮಂತ್ ಮತ್ತು ಗೆಳೆಯರು 'ದೃಷ್ಟಿ' ಎಂಬ ಸಂಸ್ಥೆ ಕಟ್ಟಿದ್ದರಂತೆ. ಆ ತಂಡದಲ್ಲಿದ್ದ ಬಹುತೇಕರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಮೇ 15 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
'ನೆಟ್ವರ್ಕ್' ಚಿತ್ರದಲ್ಲಿ ಹೇಮಂತ್ ಜತೆಗೆ ರಾಜೇಶ್ ನಟರಂಗ, ಸುಚೀಂದ್ರ ಪ್ರಸಾದ್, ಕೆ.ಎಂ.ಚೈತನ್ಯ, ಸಾಕ್ಷಿ ಮೇಘನ, ರಕ್ಷಿಕಾ ಮುಂತಾದವರು ನಟಿಸುತ್ತಿದ್ದಾರೆ.