ಶ್ರೇಯಸ್​ ಈಗ 'ದಿಲ್​ದಾರ್' … ಶೀರ್ಷಿಕೆ ಅನಾವರಣ ಮಾಡಿದ್ರು ರವಿಚಂದ್ರನ್

Dildar
Published on

ಬೆಂಗಳೂರು: ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್​ ಮಂಜು ಚಿತ್ರವೊಂದರಲ್ಲಿ ನಟಿಸುತ್ತಿರುವುದು ಈಗಾಗಲೇ ಗೊತ್ತೇ ಇದೆ. ಈಗ ಆ ಚಿತ್ರಕ್ಕೆ 'ದಿಲ್​ದಾರ್​' ಎಂದು ನಾಮಕರಣ ಮಾಡಲಾಗಿದೆ. ಅಷ್ಟೇ ಅಲ್ಲ, ಚಿತ್ರದ ಮುಹೂರ್ತ ಸಹ ಇಂದು ಮುಗಿದಿದ್ದು, ಈ ಸಂದರ್ಭದಲ್ಲಿ ರವಿಚಂದ್ರನ್​ ಅವರು ಶೀರ್ಷಿಕೆ ಅನಾವರಣ ಮಾಡಿದ್ದಾರೆ.

'ದಿಲ್​ದಾರ್' ಚಿತ್ರವು ಒಂದು ಕಾಲೇಜ್​ ಲವ್​​ಸ್ಟೋರಿಯಾಗಿದ್ದು, ಮಧು ಗೌಡ ಗಂಗೂರು ನಿರ್ದೇಶಿಸುತ್ತಿದ್ದಾರೆ. ಕೆಲವು ಧಾರಾವಾಹಿಗಳಲ್ಲದೇ, ಸಿನಿಮಾಗಳಲ್ಲೂ ಕೆಲಸ ಮಾಡಿರುವ ಶ್ರೇಯಸ್​ಗೆ ನಿರ್ದೇಶಕರಾಗಿ ಇದು ಮೊದಲ ಚಿತ್ರ. ಇನ್ನು, ಶ್ರೇಯಸ್​ಗೆ ನಾಯಕಿಯಾಗಿ 'ಬ್ಯಾಡ್​ ಮ್ಯಾನರ್ಸ್​' ಮತ್ತು 'ಅದ್ದೂರಿ ಲವರ್​' ಚಿತ್ರಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಕುಮಾರ್​ ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ಶ್ರೇಯಸ್​ಗೆ ರವಿಚಂದ್ರನ್​ ಜತೆಗೆ ಹಲವು ನಿರ್ದೇಶಕರು ಬೆಂಬಲ ಕೊಟ್ಟಿದ್ದಾರಂತೆ. ಈ ಕುರಿತು ಮಾತನಾಡುವ ಅವರು, 'ನನ್ನ ಚಿತ್ರಕ್ಕೆ ಶುಭಕೋರಲು ಬಂದ ಎಲ್ಲಾ ನಿರ್ದೇಶಕರಿಗೂ ಧನ್ಯವಾದ ತಿಳಿಸುತ್ತೇನೆ. ಪ್ರತಿಯೊಬ್ಬ ನಿರ್ದೇಶಕರ ಹತ್ತಿರವೂ ಒಂದೊಂದು ಟಿಪ್ಸ್ ತಗೊಂತಿನಿ. ರವಿಚಂದ್ರನ್​, ಯಶ್​ ನನಗೆ ಬಹಳ ಬೆಂಬಲ ಕೊಟ್ಟಿದ್ದಾರೆ. ಇಂಥದ್ದೊಂದು ಅವಕಾಶ ಕೊಟ್ಟಿದ್ದಿಕ್ಕೆ ನಿರ್ದೇಶಕ ಮಧು ಅವರಿಗೆ ಥ್ಯಾಂಕ್ಸ್​. ಮುಂದಿನ ತಿಂಗಳನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಸ್ವಲ್ಪ ಸಮಯ ಇದೆಯಾದರೂ, ನಾಳೆಯಿಂದ ರಿಹರ್ಸಲ್​ಗಳು ಪ್ರಾರಂಭವಾಗಲಿದೆ' ಎಂದು ಮಾಹಿತಿ ಕೊಟ್ಟರು.

ಶೀರ್ಷಿಕೆ ಇಟ್ಟಾಗ, ಇಂಥದ್ದೊಂದು ಟೈಟಲ್​ ಯಾರಿಗೆ ಸೂಕ್ತ ಎಂದು ಯೋಚಿಸಿದರಂತೆ ನಿರ್ದೇಶಕ ಮಧು. ಕೊನೆಗೆ ಶ್ರೇಯಸ್​ ನೆನಪಾಗಿದರಂತೆ. 'ಈ ಸಿನಿಮಾ ಕೇವಲ ನನ್ನಿಂದ ಅಲ್ಲ. ನನ್ನ ತಂಡದ ಸಪೋರ್ಟ್ ನಿಂದ ಸಾಧ್ಯವಾಗಿದೆ. ಕತೆ ರೆಡಿ ಮಾಡಿದಾಗ 'ದಿಲ್​ದಾರ್​' ಟೈಟಲ್ ಫಿಕ್ಸ್ ಮಾಡಿದಾಗ, ಆ ಹೆಸರಿಗೆ ಯಾರು ಸೂಕ್ತ ಎಂದು ಯೋಚಿಸಿದಾಗ, ಶ್ರೇಯಸ್ ಮಂಜು ನೆನಪಾದರು' ಎಂದರು.

'ದಿಲ್​ದಾರ್​' ಚಿತ್ರವನ್ನು ಏಷ್ಯಾನೆಟ್ ಮೂವೀ ಬ್ಯಾನರ್​ನಡಿ ಆರ್ ಸಂತೋಷ್ ಕುಮಾರ್ ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net