More

    ಒಬ್ಬರು ಫ್ಲವರ್; ಇನ್ನೊಬ್ಬರು ಫೈರ್!

    ಫೋಟೋಶೂಟ್ ಅಂದರೆ ಸಾಮಾನ್ಯವಾಗಿ ಸ್ಟುಡಿಯೋ ಒಳಗೆ ಕಲರ್​ಫುಲ್ ಸೆಟ್​ಗಳಲ್ಲಿ, ಲೈಟಿಂಗ್ಸ್ ನಡುವೆ, ಜನಜಂಗುಳಿ ಇಲ್ಲದೇ ಪ್ರಶಾಂತತೆಯ ಜಾಗದಲ್ಲಿ ಮಾಡಲಾಗುತ್ತದೆ. ಆದರೆ, ಕೆಲವೊಮ್ಮೆ ನಟಿಮಣಿಯರು ಹೊಸ ಸಾಹಸಕ್ಕೆ ಕೈ ಹಾಕುತ್ತಿರುತ್ತಾರೆ. ಕೆಲವು ವರ್ಷಗಳ ಹಿಂದೆ ನಟಿ ಸೋನು ಗೌಡ ರಸ್ತೆ ಮಧ್ಯೆ ಬಿದ್ದ ಗುಂಡಿಯಲ್ಲಿ ಮತ್ಸ್ಯನ್ಯೆಯಾಗಿ ಗಮನ ಸೆಳೆದಿದ್ದರು. ಅದೇ ರೀತಿ ಇದೀಗ ನಟಿ ಶಾನ್ವಿ ಶ್ರೀವಾಸ್ತವ್ ಮುಂಬೈನ ಚೋರ್ ಬಜಾರ್​ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರೆ, ನಟಿ ಖುಷಿ ರವಿ ಕೆ.ಆರ್.ಮಾರ್ಕೆಟ್​ನ ಹೂ ಮಾರುಕಟ್ಟೆಯಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

    ಹರ್ಷವರ್ಧನ್ ಬ್ಯಾಡನೂರು

    ಚೋರ್ ಬಜಾರ್​ನಲ್ಲಿ ಶಾನ್ವಿ!

    ಮುಂಬೈನ ಅತಿಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಚೋರ್ ಬಜಾರ್ ಕೂಡ ಒಂದು. ಅಲ್ಲಿಗೆ ಹೋಗಬೇಕು ಅಂತ ನಟಿ ಶಾನ್ವಿ ಶ್ರೀವಾಸ್ತವ್ ಮತ್ತವರ ತಾಯಿಗೆ ಮೊದಲಿಂದಲೂ ಆಸೆಯಿತ್ತಂತೆ. ಅದನ್ನು ಇತ್ತೀಚೆಗಷ್ಟೆ ನೆರವೇರಿಸಿಕೊಂಡಿದ್ದಾರೆ. ‘ನೈಜ ಲೊಕೇಷನ್​ನಲ್ಲಿ, ಜನರ ದೈನಂದಿನ ಬದುಕು ಹೇಗಿರುತ್ತದೆ? ಪ್ರತಿದಿನ ಎದುರಿಸುವ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತೋರಿಸಲೆಂದೇ ರಿಯಲ್ ಲೊಕೇಷನ್​ನಲ್ಲಿ ಫೋಟೋಶೂಟ್ ಮಾಡಬೇಕು ಅಂತ ಮೊದಲಿಂದಲೂ ಆಸೆಯಿತ್ತು. ಫೋಟೋಶೂಟ್ ಕೂಡ ಸಡನ್ ಪ್ಲ್ಯಾನ್ ಮಾಡಿದೆವು. ಕಾಸ್ಟ್ಯೂಮ್ ಡಿಸೈನ್ ಮಾಡಿಸಿಕೊಳ್ಳಲು ಸಮಯವಿರಲಿಲ್ಲ. ಹೀಗೆ ಯಾವುದೇ ಸಿದ್ಧತೆ ಮಾಡಿಕೊಳ್ಳದೇ ಅಮ್ಮನ 15 ವರ್ಷದ ಹಳೆಯ ಕಾಟನ್ ಸೀರೆ ಧರಿಸಿ, ಹೊರಟುಬಿಟ್ಟೆ. ಹಳೆಯ ಅಂಗಡಿಗಳು, ಆಂಟಿಕ್ ವಸ್ತುಗಳ ನಡುವೆ ಮಾಡಿರುವ ಫೋಟೋಶೂಟ್, ವಿಂಟೇಜ್ ಫೀಲ್ ನೀಡಿತು.

    ಸಾಮಾನ್ಯವಾಗಿ ಚೋರ್ ಬಜಾರ್ ಹೆಣ್ಣುಮಕ್ಕಳಿಗೆ ಸೇಫ್ ಅಲ್ಲ ಅಂತಾರೆ. ಆದರೆ, ನಮಗೆ ಆ ರೀತಿ ಅನ್ನಿಸಲಿಲ್ಲ,’ ಎನ್ನುವ ಶಾನ್ವಿ ಹೆಚ್ಚು ಬಿಸಿಲಿದ್ದ ಕಾರಣ, ಫೋಟೋಶೂಟ್ ಬಳಿಕ ಶಾಪಿಂಗ್ ಮಾಡಲು ಸಾಧ್ಯವಾಗಲಿಲ್ಲವಂತೆ. ಹೀಗಾಗಿ, ‘ಒಳ್ಳೊಳ್ಳೆ ಆಂಟಿಕ್, ವಿಂಟೇಜ್ ವಸ್ತುಗಳು ದೊರೆಯುತ್ತವೆ. ಶಾಪಿಂಗ್ ಮಾಡಲೆಂದೇ ಮತ್ತೊಮ್ಮೆ ಹೋಗುತ್ತೇನೆ’ ಎನ್ನುತ್ತಾರೆ. ಚೋರ್ ಬಜಾರ್ ಮಾತ್ರವಲ್ಲ ಮುಂಬೈನ ಹೆಸರಾಂತ ದೋಬಿ ಘಾಟ್​ನಲ್ಲೂ ಶಾನ್ವಿ ಫೋಟೋಶೂಟ್ ಮಾಡಿಸಿಕೊಂಡರಂತೆ.

    ‘ಅಲ್ಲಂತೂ ತುಂಬಾ ಕಿರಿದಾದ ಜಾಗ. ಅಲ್ಲಿ ಫೋಟೋಶೂಟ್ ಮಾಡಿದ್ದಂತೂ ಹೊಸ ಅನುಭವ ನೀಡಿತು. ಅಲ್ಲಿನ ಜನರೂ ತುಂಬ ಸರಳ. ತಾವಾಗಿ ತಾವೇ ಫೋಟೋಶೂಟ್​ಗೆ ಜಾಗ ಮಾಡಿಕೊಡುತ್ತಿದ್ದರು. ನಮ್ಮ ಅಂಗಡಿಗೆ ಬನ್ನಿ ಫೋಟೋಶೂಟ್ ಮಾಡಿ ಎಂದು ಕರೆಯುತ್ತಿದ್ದರು,’ ಎಂದು ಹೇಳಿಕೊಳ್ಳುತ್ತಾರೆ. ಇನ್ನು ಶಾನ್ವಿ ಸಿನಿಮಾಗಳಲ್ಲು ಸಾಕಷ್ಟು ಬಿಜಿಯಿದ್ದಾರೆ. ಅವರು ನಟಿಸಿರುವ ‘ಬ್ಯಾಂಗ್’ ಮೇನಲ್ಲಿ ಚುನಾವಣೆಯ ಬಳಿಕ ತೆರೆಗೆ ಬರುವ ನಿರೀಕ್ಷೆಯಿದೆ. ನಂತರ ಜೂನ್​ನಲ್ಲಿ ವೆಬ್​ಸರಣಿಯ ಶೂಟಿಂಗ್​ಗೆ ತೆರಳಲಿದ್ದಾರೆ. ಅದರ ಬೆನ್ನಲ್ಲೇ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಚಿತ್ರದ ಚಿತ್ರೀಕರಣಕ್ಕೆ ಅಮೆರಿಕಕ್ಕೆ ಹಾರಲಿದ್ದಾರೆ. ಜತೆಗೆ ಒಂದು ತೆಲುಗು ಶೋನಲ್ಲೂ ಶಾನ್ವಿ ಕಾಣಿಸಿಕೊಳ್ಳಲಿದ್ದಾರೆ.

    ಹೂಗಳ ಖುಷಿ!

    ಇನ್ನು ದಿಯಾ ಖ್ಯಾತಿಯ ನಟಿ ಖುಷಿ ರವಿ ಸಹ ಸದಾ ಜನರಿಂದ ಗಿಜಿಗುಡುವ ಕೆ.ಆರ್. ಮಾರುಕಟ್ಟೆಯ ಹೂ ಮಾರುಕಟ್ಟೆಯಲ್ಲಿ ಫೋಟೋಶೂಟ್​ನಲ್ಲಿ ಪಾಲ್ಗೊಂಡಿದ್ದಾರೆ. ಮುಂಜಾನೆಯೇ ಬಣ್ಣ ಬಣ್ಣದ ಹೂಗಳ ಮಧ್ಯೆ ತಾವೂ ಕಲರ್​ಫುಲ್ ಆಗಿ ಮಿಂಚಿದ್ದಾರೆ. ತಿಳಿ ನೀಲಿ ಬಣ್ಣದ ಸೀರೆ ಧರಿಸಿ ಹೋಮ್ಲಿ ಲುಕ್​ನಲ್ಲಿ ಕಂಗೊಳಿಸಿದ್ದಾರೆ. ಸದ್ಯ ಅವರ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts