

ಬೆಂಗಳೂರು: 'ಶ್ರೀ ಜಗನ್ನಾಥದಾಸರು', 'ಶ್ರೀ ವಿಜಯದಾಸರು', 'ಶ್ರೀ ಪ್ರಸನ್ನವೆಂಕಟದಾಸರು' ... ಹೀಗೆ ಸಾಲುಸಾಲು ದಾಸವರೇಣ್ಯರ ಚಿತ್ರಗಳನ್ನು ನಿರ್ದೇಶಿಸಿರುವ ಮಧುಸೂದನ್ ಹವಾಲ್ದಾರ್ ಈಗ ಇನ್ನೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅವರು 'ಹನುಮ ಭೀಮ ಮಧ್ವ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮಧ್ವನವಮಿ ಅಂಗವಾಗಿ, ಸೋಮವಾರ ಚಿತ್ರದ ಅಧಿಕೃತ ಘೋಷಣೆಯಾಗಿದೆ.
ವಾಯುದೇವರು ಮೊದಲು ಹನುಮನಾಗಿ ಅವತರಿಸಿ ಶ್ರೀರಾಮದೇವರನ್ನು ಸೇವೆ ಮಾಡುತ್ತಾರೆ. ನಂತರ ದ್ವಾಪರದಲ್ಲಿ ಭೀಮಸೇನನಾಗಿ ಶ್ರೀ ಕೃಷ್ಣನನ್ನು, ಆನಂತರ ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಅವತರಿಸಿ ಶ್ರೀವೇದವ್ಯಾಸ ದೇವರನ್ನು ಭಜಿಸುತ್ತಾರೆ. ಈ ಮೂರು ಅವರತಾರಗಳ ಕುರಿತು ಈ ಚಿತ್ರದಲ್ಲಿರುತ್ತದೆ.
ಶ್ರೀಗಂಧ ಪಿಕ್ಚರ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಮಧುಸೂದನ್ ಹವಾಲ್ದಾರ್ ನಿರ್ದೇಶನ ಮಾಡುತ್ತಿದ್ದಾರೆ. ಜೆ.ಎಂ. ಪ್ರಹ್ಲಾದ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ಮಹಾಮಹಿಮರ ಮಹಿಮೆ ಸಾರುವ ಎಂಟು ಹಾಡುಗಳಿರಲಿದ್ದು, ವಿಜಯ್ ಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ.
ಇದನ್ನೂ ಓದಿ: ರಾಮಾಯಣದಿಂದ ಹೃತಿಕ್ ಹೊರಕ್ಕೆ … ರಾವಣನಾಗ್ತಾರಾ ಯಶ್?
ಈ ಚಿತ್ರವನ್ನು ಆನೆಗೊಂದಿ, ಕನಕಗಿರಿ, ಬೀಳಗಿ, ಹೊಸಪೇಟೆ ಸುತ್ತಮುತ್ತ ಚಿತ್ರೀಕರಣ ಮಾಡಬೇಕೆಂಬುದು ಚಿತ್ರತಂಡದ ಯೋಚನೆ. ಈ ಚಿತ್ರದಲ್ಲಿ ಹೊಸ ಪ್ರತಿಭೆಗಳೇ ನಟಿಸುತ್ತಿರುವುದು ವಿಶೇಷ.