

ಬೆಂಗಳೂರು: ರಕ್ಷಿತ್ ಶೆಟ್ಟಿಗೆ ತಮಿಳಿನಿಂದ ಒಂದು ಆಫರ್ ಬಂದಿದೆ. ಈ ಬಾರಿ ದೊಡ್ಡ ಅವಕಾಶವೇ ಸಿಕ್ಕಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ವಿಜಯ್ ಅಭಿನಯಿಸುತ್ತಿರುವ 'ದಳಪತಿ 67' ಎಂಬ ಹೊಸ ಚಿತ್ರದಲ್ಲಿ ರಕ್ಷಿತ್ಗೆ ನಟಿಸುವುದಕ್ಕೆ ಕೇಳಲಾಗಿದೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿ ಬಂದಿತ್ತು. ಆದರೆ, ಇದು ನಿಜವೋ? ಸುಳ್ಳೋ? ಎಂಬ ಬಗ್ಗೆ ರಕ್ಷಿತ್ ಸ್ಪಷ್ಟನೆ ನೀಡಿರಲಿಲ್ಲ.
ಈಗ ಅವರು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಂದು ಟ್ವೀಟ್ ಮಾಡುವ ಮೂಲಕ ತಾವು ಕಾಲಿವುಡ್ಗೆ ಹೋಗುತ್ತಿಲ್ಲ, ವಿಜಯ್ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
''ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ನಂತರ ಮುಂದಿನ ಚಿತ್ರಗಳ ಬಗ್ಗೆ ಸ್ಪಷ್ಟತೆ ಇದೆ. ಮೊದಲು 'ಆರ್ಎ', 'ಪಿಕೆ 1 ಮತ್ತು 2', 'ಎಂ2ಎಂ'. ಈ ನಾಲ್ಕು ಚಿತ್ರಗಳಿಂದ ನನಗೆ ನಿದ್ದೆಯೇ ಬರುತ್ತಿಲ್ಲ. ಸದ್ಯಕ್ಕೆ 'ಕಿರಿಕ್ ಪಾರ್ಟಿ 2' ಬಗ್ಗೆಯೂ ಯೋಚನೆ ಇಲ್ಲ. ಮಿಕ್ಕಂತೆ ಇಂಟರ್ನೆಟ್ನಲ್ಲಿ ಬರುವ ಸುದ್ದಿಗಳೆಲ್ಲ ಸುಳ್ಳು' ಎಂದು ಬರೆದುಕೊಂಡಿದ್ದಾರೆ.
ಈ ಪೈಕಿ, 'ಆರ್ಎ' ಎಂದರೆ 'ರಿಚರ್ಡ್ ಆಂಟನಿ'. 'ಪಿಕೆ 1 ಮತ್ತು 2' ಅಂದರೆ 'ಪುಣ್ಯಕೋಟಿ 1 ಮತ್ತು 2'. ಈ ಚಿತ್ರಗಳ ಬಗ್ಗೆ ಈಗಾಗಲೇ ಸುದ್ದಿಯಾಗಿದೆ. ಕೊನೆಯಲ್ಲಿರುವ 'ಎಂ2ಎಂ' ಯಾವುದು? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಅದು 'ಮಿಡ್ನೈಟ್ ಟು ಮೋಕ್ಷ' ಎಂಬ ಇನ್ನೊಂದು ಚಿತ್ರ ಎಂದು ಹೇಳಲಾಗುತ್ತಿದೆ. ಈ ನಾಲ್ಕು ಚಿತ್ರಗಳು ಮುಗಿಯುವುದಕ್ಕೆ ಐದಾರು ವರ್ಷಗಳಾದರೂ ಬೇಕು. ಅಲ್ಲಿಗೆ ರಕ್ಷಿತ್ ಶೆಟ್ಟಿ, ಕಾಲಿವುಡ್ಗೆ ಹೋಗುತ್ತಿರುವ ವಿಷಯವನ್ನು ಸ್ವತಃ ಅಲ್ಲಗೆಳೆದಿದ್ದಾರೆ.
ಇನ್ನು, 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಚಿತ್ರೀಕರಣ ಅರ್ಧ ಮುಗಿದಿದ್ದು, ಸದ್ಯದಲ್ಲೇ ಸಂಪೂರ್ಣವಾಗಿ, ಈ ವರ್ಷದ ಜುಲೈ ಅಥವಾ ಆಗಸ್ಟ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.