

ಮುಂಬೈ: ಶಾರುಖ್ ಖಾನ್ ಅಭಿನಯದ 'ಪಠಾಣ್' ಬಿಡುಗಡೆಯಾದಾಗಿನಿಂದ ಕಂಗನಾ ರಣಾವತ್ ಒಂದಲ್ಲ ಒಂದು ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ. ಕಳೆದೊಂದು ವಾರದಿಂದ ಟ್ವಿಟರ್ನಲ್ಲಿ ಸಖತ್ ಆಕ್ಟಿವ್ ಆಗಿರುವ ಅವರು 'ಪಠಾಣ್' ಗೆಲ್ಲಿಸಿದ ಜನರನ್ನು ಕಾಲೆಳೆಯುತ್ತಲೇ ಇದ್ದಾರೆ. ಈಗ ಕಂಗನಾ, ಈ ದೇಶ ಯಾವತ್ತೂ ಖಾನ್ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದು ಹೇಳಿದ್ದಾರೆ.
'ಪಠಾಣ್' ಗೆಲುವಿನ ಕುರಿತು ನೆಟ್ಟಿಗರೊಬ್ಬರು ಟ್ವಟಿರ್ನಲ್ಲಿ ಬರೆದುಕೊಕಂಡಿದ್ದಾರೆ. ''ಪಠಾಣ್' ಚಿತ್ರದ ಗೆಲುವು ನಮಗೆ ನಾಲ್ಕು ಪಾಠಗಳನ್ನು ಕಲಿಸುತ್ತದೆ. ಮೊದಲನೆಯದಾಗಿ, ಹಿಂದು ಮತ್ತು ಮುಸ್ಲಿಮರು ಶಾರುಖ್ ಖಾನ್ ಅವರನ್ನು ಸಪನಾಗಿ ಇಷ್ಟಪಡುತ್ತಾರೆ. ಚಿತ್ರ ನೋಡಬೇಕಂತಿದ್ದರೆ, ಬಾಯ್ಕಾಟ್ ಅಭಿಯಾನಗಳು ಅಥವಾ ವಿವಾದಗಳು ಒಂದು ಸಮಸ್ಯೆಯೇ ಅಲ್ಲ. ಮೂರನೆಯದಾಗಿ, ಶೃಂಗಾರ ಮತ್ತು ಒಳ್ಳೆಯ ಸಂಗೀತ ಯಾವತ್ತೂ ವರ್ಕ್ ಆಗುತ್ತದೆ. ನಾಲ್ಕನೆಯದಾಗಿ ಭಾರತ ಒಂದು ಸೂಪರ್ ಸೆಕ್ಯುಲರ್ ದೇಶ' ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, 'ಇದೊಂದು ಅದ್ಭುತ ವಿಶ್ಲೇಷಣೆ. ಈ ದೇಶ ಯಾವತ್ತೂ ಬರೀ ಖಾನ್ಗಳನ್ನು ಪ್ರೀತಿಸಿದೆ. ಅಷ್ಟೇ ಅಲ್ಲ, ಮುಸ್ಲಿಂ ನಟಿಯರನ್ನು ಕಂಡರೆ ನಮ್ಮ ಜನರಿಗೆ ಅದೇನೋ ಗೀಳು. ಹಾಗಾಗಿ, ಭಾರತದಲ್ಲಿ ದ್ವೇಷ ಮತ್ತು ಫ್ಯಾಸಿಸಂ ಹೆಚ್ಚು ಎಂದು ಬೊಬ್ಬೆ ಹೊಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಇಡೀ ಜಗತ್ತಿನಲ್ಲಿ ಭಾರತದಂತಹ ದೇಶ ಇನ್ನೊಂದಿಲ್ಲ' ಎಂದು ಹೇಳಿಕೊಂಡಿದ್ದಾರೆ.
'ಪಠಾಣ್' ಚಿತ್ರವು ಕಳೆದ ಬುಧವಾರ ಬಿಡಗಡೆಯಾಗಿದ್ದು, ಕಳೆದ ಐದು ದಿನಗಳಲ್ಲಿ ಜಗತ್ತಿನಾದ್ಯಂತ 500 ಕೋಟಿ ರೂ. ಕಲೆಕ್ಷನ್ ಆಗಿದೆ. ಯಶಸ್ಸಿಗಾಗಿ ಹಾತೊರೆಯುತ್ತಿದ್ದ ಬಾಲಿವುಡ್ಗೆ ಈ ಯಶಸ್ಸಿನಿಂದ ದೊಡ್ಡ ಆಕ್ಸಿಜನ್ ಸಿಕ್ಕಂತಾಗಿದೆ.