

ಕನ್ನಡದಲ್ಲಿ ಹಲವು ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸಿರುವ ಎಚ್. ವಾಸು ಇದೀಗ ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಮುಗಿಸಿದ್ದಾರೆ. ಇದು ಅವರ 24ನೇ ಚಿತ್ರವಾಗಿದ್ದು, ಈ ಬಾರಿ ಸಂಪೂರ್ಣ ಹೊಸಬರನ್ನೇ ಇಟ್ಟುಕೊಂಡು ಅವರು ಚಿತ್ರ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರದ ಹೆಸರು ‘ಸಾಮರ್ಥ್ಯ’. ಹಿಂದಿನ ಚಿತ್ರಗಳಂತೆ ಇದು ಸಹ ಲವ್ ಮತ್ತು ಕ್ರೖೆಂ ಕಥೆ ಇರುವ ಚಿತ್ರವಾಗಿದ್ದು, ಇಂದಿನ ಕಾಲಘಟ್ಟಕ್ಕೆ ಸೂಕ್ತವಾಗಿದೆ.
‘ಸಾಮರ್ಥ್ಯ’ ಮೂಲಕ ಬಾಲಾಜಿ ಶರ್ಮ ಮತ್ತು ಗಗನ ಮಧು ಎಂಬ ಹೊಸ ಪ್ರತಿಭೆಗಳನ್ನು ಅವರು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದು, ಮಿಕ್ಕಂತೆ ಅವಿನಾಶ್, ಶೋಭರಾಜ್, ಪೆಟ್ರೋಲ್ ಪ್ರಸನ್ನ, ಸ್ವಾತಿ ಮುಂತಾದವರು ನಟಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ಮುಗಿದಿದೆ. ಈ ಚಿತ್ರಕ್ಕೆ ಅರುಣ್ ಆಂಡ್ಯೂ ಸಂಗೀತ ಮತ್ತು ಎ.ವಿ. ಕೃಷ್ಣಕುಮಾರ್ ಛಾಯಾಗ್ರಹಣವಿದೆ.