ಒಟಿಟಿಗೆ ಬರಲಿದೆ ‘H/34 ಪಲ್ಲವಿ ಟಾಕೀಸ್’ ಚಿತ್ರ

WhatsApp Image 2021-05-28 at 1.01.12 PM
Published on

ಬೆಂಗಳೂರು: ಈಗಾಗಲೇ ಬೇರೆ ಬೇರೆ ಭಾಷೆಗಳ ಸಾಕಷ್ಟು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆ ಆಗುತ್ತಿವೆ. ಕನ್ನಡದಲ್ಲಿ ಯಾವ ಚಿತ್ರಗಳೂ ಒಟಿಟಿ ವೇದಿಕೆಗೆ ಬರುವುದಾಗಿ ಘೋಷಿಸಿಕೊಂಡಿರಲಿಲ್ಲ. ಇದೀಗ ‘H/34 ಪಲ್ಲವಿ ಟಾಕೀಸ್’ ಚಿತ್ರ ಶೀಘ್ರದಲ್ಲಿ ಒಟಿಟಿಗೆ ಬರಲಿದೆ. ಮೊದಲಾರ್ಥವಾಗಿ ಚಿತ್ರದ ಹಾಡುಗಳು ಬಿಡುಗಡೆ ಆಗಿದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿವೆ.

ನಟ ತಿಲಕ್ ಅಭಿನಯದ "H/34 ಪಲ್ಲವಿ ಟಾಕೀಸ್" ಚಿತ್ರದ ಬರೆವೆ ಬರೆವೆ ಒಲವ ಕವನ... ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಶ್ರೀನಿವಾಸ್ ಚಿಕ್ಕಣ್ಣ (ಸೀನಿ) ಬರೆದಿರುವ ಈ ಹಾಡನ್ನು ಬಾಲಿವುಡ್‌ನ ಜನಪ್ರಿಯ ಗಾಯಕ ಅಂಕಿತ್ ತಿವಾರಿ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಗಲಿದ್ದು, ಜೂನ್ ಎರಡನೇ ವಾರದಲ್ಲಿ ಒಟಿಟಿ ಫ್ಲಾಟ್ ಫಾರಂ ಮೂಲಕ ಚಿತ್ರ ಬಿಡುಗಡೆಯಾಗಲಿದೆ. ಕಾಲಭೈರವ ಆರ್ಟ್ಸ್ ಲಾಂಛನದಲ್ಲಿ ಮಂಜುನಾಥ್ ಕೆ ಹಾಗೂ ರವಿಕಿರಣ್ ಎಂ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಶ್ರೀನಿವಾಸ್ ಚಿಕ್ಕಣ್ಣ ನಿರ್ದೇಶಿಸಿದ್ದಾರೆ.

ಈ ಹಿಂದೆ "6ನೇ ಮೈಲಿ" ಚಿತ್ರವನ್ನು ನಿರ್ದೇಶಿಸಿದ್ದ, ಶ್ರೀನಿವಾಸ್ ಚಿಕ್ಕಣ್ಣ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಹಾರರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಈ ಚಿತ್ರಕ್ಕಿದೆ. ತಿಲಕ್ ಅವರಿಗೆ ನಾಯಕಿಯಾಗಿ ಯಜ್ಞಾ ಶೆಟ್ಟಿ ಅಭಿನಯಿಸಿದ್ದಾರೆ. ಸುಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತಕುಮಾರ್, ಪದ್ಮಜಾರಾವ್, ಕುರಿ ಪ್ರತಾಪ್, ವಿಶ್ವ, ಅಮೃತ ಮಯೂರಿ, ರಾಜೇಶ್ವರಿ, ರಾಕ್ ಲೈನ್ ಸುಧಾಕರ್, ಅಜಯ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net