ಸತ್ಯ ಮತ್ತು ಸುಳ್ಳಿನ ನಡುವಿನ 'ಗ್ರೇ ಗೇಮ್ಸ್​'; ಟೀಸರ್​ ಬಿಡುಗಡೆ

Grey Games
Published on

ಬೆಂಗಳೂರು: ವಿಜಯ್​ ರಾಘವೇಂದ್ರ ಇತ್ತೀಚಿನ ದಿನಗಳಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದ್ದು, ಈಗ ಅವರು 'ಗ್ರೇ ಗೇಮ್ಸ್​' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಮನಶ್ಶಾಸ್ತ್ರಜ್ಞನ ಪಾತ್ರ ಮಾಡಿದ್ದಾರೆ. ಕಳೆದ ವರ್ಷ ಪ್ರಾರಂಭವಾದ ಈ ಚಿತ್ರ ಇದೀಗ ಮುಕ್ತಾಯವಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್​ ಸಹ ಬಿಡುಗಡೆಯಾಗಿದೆ.

'ಗ್ರೇ ಗೇಮ್ಸ್​' ಒಂದು ಸೈಕಲಾಜಿಕಲ್​ ಥ್ರಿಲ್ಲರ್​ ಚಿತ್ರವಾಗಿದ್ದು, ವಿಜಯ್​ ರಾಘವೇಂದ್ರ ಜತೆಗೆ ಶ್ರುತಿ ಪ್ರಕಾಶ್, ಭಾವನಾ ರಾವ್, ಅಪರ್ಣಾ, ರವಿ ಭಟ್, ಜೈ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸತ್ಯ ಮತ್ತು ಸುಳ್ಳಿನ ನಡುವಿನ ಕುರಿತಾದ ಚಿತ್ರ ಇದಾಗಿದ್ದು, ಆನ್‌ಲೈನ್ ಗೇಮಿಂಗ್​ಗೆ ಸಂಬಂಧಿಸಿದ ಅಪರಾಧಗಳ ವಿಷಯಗಳ ಸುತ್ತ ಸುತ್ತುತ್ತದೆ. ವಿಜಯ್ ರಾಘವೇಂದ್ರ ಇಲ್ಲಿ ಮನಶ್ಶಾಸ್ತ್ರಜ್ಞನಾಗಿ ಕಾಣಿಸಿಕೊಂಡರೆ, ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಭಾವನಾ ರಾವ್​ ಮತ್ತು ಚಿತ್ರನಟಿಯಾಗಿ ಶ್ರುತಿ ಪ್ರಕಾಶ್​ ಅಭಿನಯಿಸಿದ್ದಾರೆ. ತಂತ್ರಜ್ಞಾನ ಯುಗದಲ್ಲಿ ನಮ್ಮ ಮೇಲಾಗುವ ಮಾನಸಿಕ ಒತ್ತಡವನ್ನು ಆಧರಿಸಿದೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸಾಲಿಮಠ, 'ರಿಯಾಲಿಟಿ ಮತ್ತು ವರ್ಚುವಾಲಿಟಿ ಜಗತ್ತಿನ ಕಥೆಯುಳ್ಳ ಈ ಚಿತ್ರವು ಮನರಂಜನೆಯ ಜತೆಗೆ, ಗ್ರಹಿಕೆಗೆ ಸವಾಲು ಹಾಕುತ್ತದೆ ಎಂಬ ವಿಶ್ವಾಸವಿದೆ' ಎನ್ನುತ್ತಾರೆ.

ಗಂಗಾಧರ ಸಾಲಿಮಠ್ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ-ಚಿತ್ರಕಥೆಯನ್ನೂ ಬರೆದಿದ್ದಾರೆ. ವರುಣ್​ ಡಿ.ಕೆ ಛಾಯಾಗ್ರಹಣವಿರುವ ಈ ಚಿತ್ರವನ್ನು ಆನಂದ ಹೆಚ್.ಮುಗದ್ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net