ಈ ಚಿತ್ರದಲ್ಲಿರೋದು ಒಂದೇ ಪಾತ್ರ; 'ರಾಘು' ಬಿಡುಗಡೆ ದಿನಾಂಕ ಫಿಕ್ಸ್​

Raaghu
Published on

ಬೆಂಗಳೂರು: ವಿಜಯ್​ ರಾಘವೇಂದ್ರ ಅಭಿನಯದಲ್ಲಿ 'ರಾಘು' ಎಂಬ ಏಕಪಾತ್ರವಿರುವ ಚಿತ್ರ ಬರುತ್ತಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಈಗ ಆ ಚಿತ್ರ ಸಂಪೂರ್ಣವಾಗಿರುವುದಷ್ಟೇ ಅಲ್ಲ, ಚಿತ್ರದ ಬಿಡುಗಡೆ ದಿನಾಂಕ ಸಹ ಫಿಕ್ಸ್​ ಆಗಿದೆ.

ಹೌದು, 'ರಾಘು' ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್​ ಆಗಿದ್ದು, ಏಪ್ರಿಲ್​ 28ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಿಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಹೌಸ್​ನಡಿ ಈ ಚಿತ್ರವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ್ ಕೋಟ ನಿರ್ಮಾಣ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿಜಯ್ ರಾಘವೇಂದ್ರ ನಟರಾಗಿ ಹಲವು ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆ ಪೈಕಿ 'ರಾಘು' ಸಹ ಒಂದು. ಈ ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಒಬ್ಬರೇ ಆರಂಭದಿಂದ ಕೊನೆಯವರೆಗೂ ಇರುತ್ತಾರೆ. ಇದೊಂದು ಥ್ರಿಲ್ಲರ್​ ಚಿತ್ರವಾಗಿದ್ದು, ಕಥೆಯೇನು ಎಂಬುದನ್ನು ಚಿತ್ರತಂಡ ರಹಸ್ಯವಾಗಿ ಇಟ್ಟಿದೆ.

ಈ ಹಿಂದೆ 'ಆನ' ಹಾಗೂ 'ಬ್ಯಾಂಗ್' ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಆನಂದ್​ ರಾಜ್​ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರುಳಿಧರ್ ಹಿನ್ನೆಲೆ ಸಂಗೀತ ಇರುವ ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು, ವಾಸುಕಿ ವೈಭವ್ ಹಾಗೂ ಆಲ್​ ಓಕೆ ಹಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net