

ಪವನ್ ಒಡೆಯರ್ ನಿರ್ದೇಶನದ ಮತ್ತು ಯಶ್-ಕೃತಿ ಖರಬಂದಾ ಅಭಿನಯದ 'ಗೂಗ್ಲಿ' ಚಿತ್ರವು ಬಿಡುಗಡೆಯಾಗಿ ಜುಲೈ 19ಕ್ಕೆ ಏಳು ವರ್ಷಗಳಾಗಿವೆ. ಚಿತ್ರದ ಸೀಕ್ವೆಲ್ ಮಾಡಬೇಕು ಎಂಬ ಒತ್ತಾಯ ಯಶ್ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಹೀಗಿರುವಾಗಲೇ, ಪವನ್ ಚಿತ್ರದ ಟೈಟಲ್ ಟೀಸರ್ ಮತ್ತೊಮ್ಮೆ ಪ್ರತ್ಯಕ್ಷವಾಗಿದೆ.
ಚಿತ್ರದ ಟೈಟಲ್ಗೆಂದೇ ಪ್ರತ್ಯೇಕವಾದ ಟೀಸರ್ ಮಾಡುವ ಪರಿಪಾಠ ಕನ್ನಡ ಚಿತ್ರರಂಗದಲ್ಲಿರಲಿಲ್ಲ. ಅದನ್ನು 'ಗೂಗ್ಲಿ' ಮೂಲಕ ಮೊದಲ ಬಾರಿಗೆ ಪ್ರಯತ್ನಿಸಿದ್ದರು ಪವನ್. ಈ ಟೀಸರ್ ಮಾಡಿ, ಯೂಟ್ಯೂಬ್ನ ತಮ್ಮದೇ ಚಾನಲ್ನಲ್ಲಿ ಬಿಡುಗಡೆ ಮಾಡಿದ್ದರು. ಈಗ ಅದನ್ನು ಮತ್ತೊಮ್ಮೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಪವನ್ ಟೈಟಲ್ ಟೀಸರ್ ಮಾಡುವುದಕ್ಕೂ ಒಂದು ಕಾರಣವಿದೆ. ಪ್ರಮುಖವಾಗಿ, ಅವರು ಚಿತ್ರಕ್ಕೆ 'ಗೂಗ್ಲಿ' ಎಂಬ ಹೆಸರಿಟ್ಟಾಗ, ನಿರ್ಮಾಪಕ ಜಯಣ್ಣ ಬೇಡ ಎಂದರಂತೆ. 'ಅಪ್ಪಾಜಿ, ಗೂಗ್ಲಿ ಎಂದರೇನು ಅಂತ ನನಗೇ ಅರ್ಥ ಆಗಲ್ಲ. ಇನ್ನು ಜನಕ್ಕೇನು ಗೊತ್ತಾಗುತ್ತೆ' ಎಂದರಂತೆ. ಆದರೆ, ಗೂಗ್ಲಿ ಎನ್ನುವುದು ಪಾಪ್ಯುಲರ್ ಆದ ಪದ. ಕ್ರಿಕೆಟ್ ಗೊತ್ತಿರುವವರಿಗೆ ಖಂಡಿತಾ ಅರ್ಥವಾಗುತ್ತದೆ ಎಂದು ಪವನ್ ಹೇಳಿದರಂತೆ.
ಕೊನೆಗೆ ಈ ಪದ ಎಷ್ಟು ಜನರಿಗೆ ಅರ್ಥವಾಗುತ್ತದೋ ಎಂದು ತಿಳಿದುಕೊಳ್ಳುವುದಕ್ಕೆ ಹಲವರನ್ನು ಸಂದರ್ಶನ ಮಾಡಿದ್ದಾರೆ. ಆ ಬೈಟ್ಗಳನ್ನೆಲ್ಲಾ ಇಟ್ಟುಕೊಂಡು ಒಂದು ಚೆಂದದ ಟೀಸರ್ ಮಾಡಿದ್ದಾರೆ. ಆ ಟೀಸರ್ ಎಲ್ಲರಿಂದ ಮೆಚ್ಚುಗೆ ಪಡೆದಿತ್ತು. ಆದರೆ, ಏಳು ವರ್ಷಗಳ ಹಿಂದೆ ಇಂಟರ್ನೆಟ್ ಬಳಕೆ ಕಡಿಮೆ ಇತ್ತು. ಇನ್ನು ಯೂಟ್ಯೂಬ್ ನೋಡುವವರ ಸಂಖ್ಯೆ ಇನ್ನೂ ಕಡಿಮೆಯೇ. ಹಾಗಾಗಿ, ಆಗ ಮಾಡಿದ ಟೀಸರ್ ಬಗ್ಗೆ ಜನ ಈಗೇನು ಹೇಳುತ್ತಾರೆ ಎಂಬ ಕುತೂಹಲದಿಂದ, ಈ ಟೀಸರ್ ಹಂಚಿಕೊಂಡಿದ್ದಾರೆ ಪವನ್ ಒಡೆಯರ್.
ಅಂದಹಾಗೆ, 'ಗೂಗ್ಲಿ' ಚಿತ್ರದಲ್ಲಿ ಯಶ್ ಮತ್ತು ಕೃತಿ ಜತೆಗೆ ಅನಂತ್ ನಾಗ್, ಸುಧಾ ಬೆಳವಾಡಿ, ಸಾಧು ಕೋಕಿಲ ಮುಂತಾದವರು ಅಭಿನಯಿಸಿದ್ದರು. ಚಿತ್ರಕ್ಕೆ ಜೋಶ್ವಾ ಶ್ರೀಧರ್ ಸಂಗೀತ ಸಂಯೋಜಿಸಿದ್ದರು.