

ಮೊದಲು ಪ್ರಾರಂಭವಾಗಿದ್ದು ‘ಮಿಷನ್ ಮಿಜ್ನು’. ಎಲ್ಲ ಅಂದುಕೊಂಡಂತೆ ಆಗಿದ್ದರೆ ಆ ಚಿತ್ರ ಇಷ್ಟರಲ್ಲಿ ಬಿಡುಗಡೆ ಆಗಿರಬೇಕಿತ್ತು. ಜೂನ್ 10ಕ್ಕೆ ಚಿತ್ರ ಬಿಡುಗಡೆ ಆಗುತ್ತದೆ ಎಂದು ಸುದ್ದಿಯೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಮುಂದಕ್ಕೆ ಹೋಗಿದ್ದರಿಂದ, ರಶ್ಮಿಕಾ ಅಭಿನಯದ ಎರಡನೇ ಹಿಂದಿ ಚಿತ್ರ ಮೊದಲು ಬಿಡುಗಡೆ ಯಾಗುತ್ತಿದೆ. ಚಿತ್ರವು ಅ.7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಅದರ ಮೊದಲ ಹಂತವಾಗಿ ಚಿತ್ರದ ಮೊದಲ ಪೋಸ್ಟರ್ ಶನಿವಾರ ಬಿಡುಗಡೆಯಾಗಿದೆ. ಈ ಚಿತ್ರದ ಹೆಸರು ‘ಗುಡ್ಬೈ’.
ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದು, ಅವರ ಮಗಳಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಅಪ್ಪ-ಮಗಳು ಇಬ್ಬರೂ ಗಾಳಿಪಟ ಹಾರಿಸುತ್ತಿರುವ ಪೋಸ್ಟರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ‘ಗುಡ್ಬೈ’ ಚಿತ್ರದ ಚಿತ್ರೀಕರಣ ಒಂದು ವರ್ಷದ ಹಿಂದೆಯೇ ಪ್ರಾರಂಭವಾದರೂ, ಇದುವರೆಗೂ ಕಥೆ ಏನು ಎಂದು ಚಿತ್ರತಂಡ ಎಲ್ಲೂ ಬಿಟ್ಟುಕೊಟ್ಟಿಲ್ಲ. ತಂದೆ-ಮಗಳ ಬಾಂಧವ್ಯದ ಕಥೆ ಎಂದಷ್ಟೇ ಹೇಳಿಕೊಂಡು ಬಂದಿದೆ. ಪ್ರೀತಿ, ಸಂಬಂಧ ಮತ್ತು ಜೀವನವನ್ನು ಸಂಭ್ರಮಿಸುವ ಈ ಚಿತ್ರದಲ್ಲಿ ಅಮಿತಾಭ್ ಮತ್ತು ರಶ್ಮಿಕಾ ಜತೆಗೆ ನೀನಾ ಗುಪ್ತಾ, ಸುನೀಲ್ ಗ್ರೋವರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಹೃತಿಕ್ ರೋಶನ್ ಅಭಿನಯದ ‘ಸೂಪರ್ 30’ ಮತ್ತು ಶಾಹಿದ್ ಕಪೂರ್ ಅಭಿನಯದ ‘ಶಾಂದಾರ್’ ಚಿತ್ರಗಳನ್ನು ನಿರ್ದೇಶಿಸಿದ್ದ ವಿಕಾಸ್ ಬಹ್ಲ್, ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಈ ಚಿತ್ರವನ್ನು ನಿರ್ವಿುಸಿದ್ದಾರೆ. -ಏಜೆನ್ಸೀಸ್