'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದಿಂದ ಬಂತು 'ಗೋಲ್ಡ್​ ಫ್ಯಾಕ್ಟರಿ'!

Elra Kaaleliyatte Kaala - Final
Published on

ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ 'ಎಲ್ರ ಕಾಲೆಳಿಯತ್ತೆ ಕಾಲ' ಎಂಬ ಚಿತ್ರವನ್ನು ಶುರು ಮಾಡಿದ್ದರು ನಟ-ನಿರ್ದೇಶಕ ಸುಜಯ್​ ಶಾಸ್ತ್ರಿ. ಚಂದನ್​ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು, ಇತ್ತೀಚೆಗೆ ಆ ಚಿತ್ರದ ಮೊದಲ ಹಾಡು ಸಹ ಬಿಡುಗಡೆಯಾಗಿದೆ.

ಯೂಟ್ಯೂಬ್​ನ ಆನಂದ್ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿರುವ 'ಗೋಲ್ಡ್​ ಫ್ಯಾಕ್ಟರಿ' ಎಂಬ ಹಾಡಿನ ವಿಶೇಷತೆಯೆಂದರೆ, ಇದೊಂದು ಮದುವೆ ರಿಸೆಪ್ಶನ್​ ಹಾಡು. ಈ ಹಾಡಿನಲ್ಲಿ ಚಂದನ್​ ಶೆಟ್ಟಿ, ನಾಯಕಿ ಅರ್ಚನಾ ಕೊಟ್ಟಿಗೆ, ಸುಜಯ್​ ಶಾಸ್ತ್ರಿ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಈ ಹಾಡಿನ ಕುರಿತು ಮಾತನಾಡುವ ಸುಜಯ್​ ಶಾಸ್ತ್ರಿ, 'ನಮ್ಮ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ. ಸದ್ಯದಲ್ಲೇ ಮೊದಲ ಪ್ರತಿ ಬರಲಿದೆ. ಈ ಹಾಡಿನ ಮೂಲಕ ಪ್ರಚಾರ ಶುರುವಾಗಲಿದೆ. ರಾಜಗುರು ಹೊಸಕೋಟೆ ಬರೆದಿರುವ ಈ ಹಾಡನ್ನು ಗುರುರಾಜ ಹೊಸಕೋಟೆ, ಪ್ರವೀಣ್ - ಪ್ರದೀಪ್ ಹಾಡಿದ್ದಾರೆ. ಇನ್ನು ಮುಂದೆ, ಚಿತ್ರ ಬಿಡುಗಡೆಯವರೆಗೂ 5 ಅಥವಾ 10 ದಿನಗಳಿಗೊಮ್ಮೆ ಚಿತ್ರದ ಹಾಡು ಅಥವಾ ಕಂಟೆಂಟ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರವನ್ನು ಮುಂದುವರೆಸುತ್ತೇವೆ' ಎನ್ನುತ್ತಾರೆ.

ಇದೊಂದು 80ರ ದಶಕದ ಕಥೆಯಂತೆ. 'ಒಂದು ಘಟನೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವ ತರಹದ ಪಾತ್ರ ವಹಿಸುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದೇವೆ. ಕಾಲ ಯಾರನ್ನೂ ಬಿಡುವುದಿಲ್ಲ, ಎಲ್ಲರ ಕಾಲನ್ನೂ ಎಳೆಯುತ್ತದೆ ಎಂದು ಈ ಚಿತ್ರದ ಮೂಲಕ ತೋರಿಸುವುದಕ್ಕೆ ಹೊರಟಿದ್ದೇವೆ. ಇಲ್ಲಿ ಚಂದನ್ ಮತ್ತು ಅರ್ಚನಾ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಅವರು ನಟಿಸಬಾರದು, ಸಹಜವಾಗಿ ವರ್ತಿಸಬೇಕು ಎಂಬುದು ನನ್ನ ಆಸೆ ಆಗಿತ್ತು. ಹಾಗಾಗಿ, ವರ್ಕ್​ಶಾಪ್​ ಮಾಡಿದೆ. ಇಬ್ಬರೂ ಬಹಳ ಸಹಜವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರ ವಿಭಿನ್ನವಾಗಿ ಮತ್ತು ನಾವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕರು ಮತ್ತು ಚಿತ್ರತಂಡದವರ ಸಹಕಾರವಿಲ್ಲದಿದ್ದರೆ, ಈ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ನಾನು ಚಿರ ಋಣಿ' ಎನ್ನುತ್ತಾರೆ ಸುಜಯ್​ ಶಾಸ್ತ್ರಿ.

ಈ ಹಾಡಿನಲ್ಲಿ ನಾನು ತುಂಬಾ ಸಿಟ್ಟಾಗಿರುತ್ತೇನೆ ಎನ್ನುವ ನಾಯಕ ಚಂದನ್​ ಶೆಟ್ಟಿ, 'ನನ್ನ ಸಿಟ್ಟಿಗೆ ಒಂದು ಕಾರಣವೂ ಇರುತ್ತದೆ. ಆ ಕಾರಣ ಏನು ಎಂದು ಚಿತ್ರಮಂದಿರದಲ್ಲೇ ನೋಡಬೇಕು. ಹಾಡು, ಚಿತ್ರ ಎರಡೂ ಬಹಳ ಚೆನ್ನಾಗಿ ಮೂಡಿ ಬಂದಿದೆ. ಇದೊಂದು ವಿಭಿನ್ನವಾದ ಚಿತ್ರ. ಸುಜಯ್ ಶಾಸ್ತ್ರಿ ಅವರಿಂದ ತುಂಬಾ ಕಲಿತೆ. ಅವರು ನನ್ನನ್ನು ಚೆನ್ನಾಗಿ ಮೌಲ್ಡ್ ಮಾಡಿದ್ದಾರೆ' ಎನ್ನುತ್ತಾರೆ ನಾಯಕ ಚಂದನ್ ಶೆಟ್ಟಿ.

ನಟಿಯಾಗಿ ಒಂದು ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಬಹಳ ಆಸೆ ಇತ್ತಂತೆ ಅರ್ಚನಾ ಕೊಟ್ಟಿಗೆ ಅವರಿಗೆ. 'ಆ ಆಸೆ ಈ ಚಿತ್ರದ ಮೂಲಕ ಈಡೇರಿದೆ. ಚಿತ್ರದಲ್ಲಿ ಅದ್ಭುತವಾದ ತಾರಾಗಣವಿದೆ. ತಾರಾ, ದತ್ತಣ್ಣ, ಮಂಡ್ಯ ರಮೇಶ್, ಮಂಜು ಪಾವಗಡ, ರಜನಿಕಾಂತ್ ಮುಂತಾದವರು ಅಭಿನಯಿಸಿದ್ದಾರೆ' ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ಉಷಾ ಗೋವಿಂದರಾಜು ನಿರ್ಮಾಣದ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರಕ್ಕೆ ರಾಜಗುರು ಹೊಸಕೋಟೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರವೀಣ್-ಪ್ರದೀಪ್ ಅವರ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net